ಬೆಂಗಳೂರು: ಬೀದರ್ ಗುತ್ತಿಗೆದಾರರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ನಾಯಕರು ಪೋಸ್ಟರ್ ಅಭಿಯಾನ ನಡೆಸಿದರು.
ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಹಾಗೂ ರವಿಕುಮಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರ ಸಚಿವ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆಗಾರರು ಎಂದು ಘೋಷಣೆ ಕೂಗಿದರು. ಕೈಲಿದ್ದ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದರು.
ಇದೊಂದು ಭ್ರಷ್ಟ ಸರ್ಕಾರ. ಏನೇ ಮಾಡಿದರೂ ತಮ್ಮನ್ನು ಯಾರು ಕೇಳುವುದಿಲ್ಲ ಎಂದುಕೊಂಡಿದ್ದಾರೆ. ಗುತ್ತಿಗೆದಾರರನ ಡೆತ್ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಹೆಸರು ಇದೆ. ಇದಕ್ಕೆ ಸಚಿವರೇ ಜವಾಬ್ದಾರರು ಎಂದು ಬಿಜೆಪಿ ನಾಯಕರು ಸಚಿವ ‘ಪ್ರಿಯಾಂಕ್ ಖರ್ಗೆ ಸುಪಾರಿ ಸ್ಪಾನ್ಸರ್’ ಎಂಬ ಪೋಸ್ಟರ್ ಅನ್ನು ವಿವಿಧೆಡೆ ಗೋಡೆಗಳಿಗೆ ಅಂಟಿಸಿದರು. ಸಚಿವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಸೂಸೈಡ್ ಹಾಗೂ ಸುಪಾರಿ ಭಾಗ್ಯ ನೀಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂಬ ಪೋಸ್ಟರ್ಗಳನ್ನು ಅಂಟಿಸಿ, ಕೈ ಹಿಡಿದು ಬಿಜೆಪಿ ಕಾಯರ್ತರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಹಿಂದೆ ನಡೆದಿದ್ದ ಕೆಲವು ಘಟನೆಗಳನ್ನು ವಿವರಿಸಿದ ಸಚಿವರಾದ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ ಮತ್ತು ಶಾಸಕ ಚೆನ್ನಾರೆಡ್ಡಿ ಅವರ ಫೋಟೋ ಪೋಸ್ಟರ್ ಮಾಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆತ್ಮಹತ್ಯೆ ಭಾಗ್ಯ ಜಾರಿಗೊಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರಣಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಹತ್ಯೆ. ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಬರೆದಿಟ್ಟರೂ, ಪ್ರಿಯಾಂಕ್ ಖರ್ಗೆ ಅವರ ಆಪ್ತ, ಕೊಲೆಗಾರ ರಾಜು ಕಪನೂರನ್ನು ಬಂಧಿಸದಿರುವುದು ಈ ಕೊಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ ಎಂಬುದಕ್ಕೆ ಸಾಕ್ಷಿ. ಸಿಎಂ ಸಿದ್ದರಾಮಯ್ಯನರೇ ಕೊಲೆಗಡುಕ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಗುತ್ತಿಗೆದಾರ ಸಚಿನ್ ಅವರ ಸಾವಿಗೆ ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.