ಕೊಪ್ಪಳ: ಕೊಪ್ಪಳದ ಗವಿಮಠದ ಮುಂದಿನ ಮೈದಾನದಲ್ಲಿ ಇಂದು (ಜನವರಿ 12) ಜನನಿಬಿಡ ಪ್ರದೇಶದಲ್ಲಿಯೇ ಮಹಿಳೆಯೋರ್ವಳ ಬರ್ಬರ ಕೊಲೆಯಾಗಿದೆ. ದಕ್ಷಿಣ ಭಾರತದ ಕುಂಬಮೇಳ ಅಂತಲೇ ಖ್ಯಾತಿ ಪಡೆದಿರೋ ಗವಿಮಠದ ಜಾತ್ರೆ ಇದೇ ಜನವರಿ 15 ರಿಂದ ಆರಂಭವಾಗಲಿದೆ. ಜಾತ್ರೆ ಅಂಗವಾಗಿ ಎಲ್ಲಾ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ. ಜಾತ್ರೆಗೆ ರಾಜ್ಯದ ವಿವಿಧಡೆಯಿಂದ ವ್ಯಾಪರಸ್ಥರು ಬಂದಿದ್ದು, ಅವರಿಗಾಗಿಯೇ ಮಠದ ಮುಂದಿನ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪರಸ್ಥರು, ತಮಗೆ ನಿಗದಿ ಪಡಿಸಿದ ಜಾಗದಲ್ಲಿ ಸ್ಟಾಲ್ ಗಳನ್ನು ಹಾಕುತ್ತಿದ್ದಾರೆ. ಇದರ ಮಧ್ಯೆ ಕೊಲೆಯೊಂದು ನಡೆದಿದೆ. ಹೌದು ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿಯನ್ನೇ ಪತಿರಾಯ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಭುವನಹಳ್ಳಿ ಗ್ರಾಮದ ನಿವಾಸಿಯಾಗಿರೋ ಇಪ್ಪತ್ತಾರು ವರ್ಷದ ಗೀತಾ ಮತ್ತು ಆಕೆಯ ಪತಿ ರಾಜೇಶ್ ಕೂಡಾ ವ್ಯಾಪರಕ್ಕೆಂದೆು ಗವಿಮಠದ ಜಾತ್ರೆಗೆ ಬಂದಿದ್ದಾರೆ. ಬಾಂಡೆ ಸಾಮಾನಿನ ಸ್ಟಾಲ್ ಹಾಕಲು ಜಾಗ ಪಡೆದಿದ್ದು,ಸ್ಟಾಲ್ ಹಾಕಲು ಹತ್ತು ದಿನದ ಹಿಂದೆಯೇ ಕೊಪ್ಪಳಕ್ಕೆ ಬಂದಿದ್ದಾರೆ. ಆದ್ರೆ ಇಂದು ಗೀತಾಳ ಬರ್ಬರ ಕೊಲೆಯಾಗಿದೆ. ಇನ್ನು ಗೀತಾಳನ್ನು ಕೊಲೆ ಮಾಡಿದ್ದು ಬೇರಾರು ಅಲ್ಲಾ, ಆಕೆಯ ಪತಿ ರಾಜೇಶ್.
ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ, ಮೈದಾನದಲ್ಲಿ ಚಾಕುವಿನಿಂದ ಕುತ್ತಿಗೆ ಸೇರಿದಂತೆ ಮೂರು ಕಡೆ ಇರದಿದ್ದಾನೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಜನರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಕೆಲವರು ಆರೋಪಿಯನ್ನು ಹಿಡಿದ್ರೆ, ಕೆಲವರು ಕೂಡಲೇ ಗೀತಾಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗುವ ಮುನ್ನವೇ ಗೀತಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಇನ್ನು ಪತಿ ರಾಜೇಶ್ ನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.