ಹೈದರಾಬಾದ್: ಭವಾನಿ ರಜಪೂತ್ (7 ಅಂಕ) ಅವರ ರೈಡಿಂಗ್ ಮತ್ತು ಶಾವುಲ್ ಕುಮಾರ್ (5 ಅಂಕ) ಅವರ ರಕ್ಷಣಾ ಆಟದ ನೆರವಿನಿಂದ ಯು.ಪಿಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ನ 11ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು. ಸೋಮವಾರ ನಡೆದ ಪಂದ್ಯದಲ್ಲಿ ಯೋಧಾಸ್ ತಂಡ 28-23 ರಿಂದ ಡೆಲ್ಲಿ ದಬಾಂಗ್ ತಂಡವನ್ನು ಮಣಿಸಿತು.
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಹಣಾಹಣಿ ಕಂಡುಬಂದಿದ್ದು, ಯೋಧಾಸ್ 12-11ರಲ್ಲಿ ಒಂದು ಪಾಯಿಂಟ್ ಮುನ್ನಡೆ ಪಡೆದಿತ್ತು. ವಿರಾಮದ ನಂತರ ಯೋಧಾಸ್ ತಂಡದ ರಕ್ಷಣಾ ಕೌಶಲದಿಂದ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ಡೆಲ್ಲಿ ಪರ ಅನುಭವಿ ರೈಡರ್ಗಳಾದ ನವೀನ್, ಆಶು ಮಲಿಕ್ ರೈಡಿಂಗ್ನಲ್ಲಿ ಮಿಂಚಿದರು.
ಆಲ್ರೌಂಡರ್ ಆಶೀಶ್ ಅವರೂ ನಾಲ್ಕು ಪಾಯಿಂಟ್ ಗಳಿಸಿದರು. ದಬಾಂಗ್ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋತಂತಾಗಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಹತ್ತನೇ ಆವೃತ್ತಿಯ ಚಾಂಪಿಯನ್ ಪುಣೇರಿ ಪಲ್ಟನ್ ತಂಡವು 40-25ರಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಎರಡನೇ ಜಯ ದಾಖಲಿಸಿತು.