ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸೇರಿದಂತೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತ ಎಣಿಕೆ ನಡೆಯಲಿದೆ.ಮತ ಎಣಿಕೆ ಸಂಬಂಧ ಮತ ಎಣಿಕೆಗಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಹರಾಷ್ಟ್ರದ 288 ಕ್ಷೇತ್ರಗಳು ಸೇರಿದಂತೆ ಜಾರ್ಖಂಡ್ ರಾಜ್ಯ ಮತ್ತು ಕೆಲ ರಾಜ್ಯಗಳಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಗಳ ಮತ ಎಣಿಕೆಯೂ ನಾಳೆಯೇ ನಡೆಯಲಿದೆ.ಚುನಾವಣಾ ಫಲಿತಾಂಶಕ್ಕಾಗಿ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ರಾಜ್ಯದ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಎದುರಾಗಿದ್ದು, ಎನ್ಡಿಎ ಮತ್ತು ಕಾಂಗ್ರೆಸ್ ಬೆಂಬಲಿಗ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುವುದು ಎಂದು ಕಾತುರರಾಗಿ ಬೆಟ್ಟಿಂಗ್ ಕಟ್ಟಿದ್ದಾರೆ. ಮಾಹಿತಿ ಪ್ರಕಾರ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ವಹಿವಾಟು ಕ್ಷೇತ್ರದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ನಗದು ಜತೆಗೆ ಜಮೀನು ಟ್ರ್ಯಾಕ್ಟರ್ ಕುರಿ ಕೋಳಿ ಹಾಗೂ ಎತ್ತುಗಳನ್ನು ಸಹ ಬಾಜಿ ಕಟ್ಟಲಾಗಿದೆ ಎಂದು ತಿಳಿದುಬಂದಿದೆ.ಚುನಾವಣೋತ್ತರ ಸಮೀಕ್ಷೆ ನಂತರ ಎನ್ಡಿಎ ಅಭ್ಯರ್ಥಿ ನಿಖಿಲ್ಕುಮಾರಸ್ವಾಮಿ ಪರವಾಗಿ ಬೆಟ್ಟಿಂಗ್ ಕಟ್ಟುವ ಭರಾಟೆ ಜೋರಾಗಿ ನಡೆದಿದೆ.ನಾಳೆ ರಾಮನಗರ ಇಂಜಿನಿಯರ್ ಕಾಲೇಜಿನ ಮೂರು ಹಾಲ್ಗಳಲ್ಲಿ ಮತ ಎಣಿಕೆಗಾಗಿ ಸಕಲ ಸಿದ್ಧತೆ ನಡೆಸಲಾಗಿದೆ.ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕೇರಳದ ವಯನಾಡಿನ ಉಪಚುನಾವಣೆ ಮತ ಎಣಿಕೆ ಬಗ್ಗೆ ಎಲ್ಲರ ದೃಷ್ಟಿ ನಾಟಿದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಿಯಾಂಕ ಗಾಂಧಿ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.