ಚೆನ್ನೈ: ಫೆಂಗಲ್ ಚಂಡಮಾರುತವು ತಮಿಳುನಾಡಿನಾದ್ಯಂತ ಅನಾಹುತಗಳನ್ನು ಸೃಷ್ಟಿಮಾಡುತ್ತಿದೆ. ತಿರುವಣ್ಣಾಮಲೈನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತ ಸಂಭವಿಸಿದೆ. ಐದು ಮಕ್ಕಳು ಸೇರಿ 7 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ವಿದ್ಯುತ್ ಶಾಕ್ನಿಂದ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಫೆಂಗಲ್ ಚಂಡಮಾರುತದ ಪ್ರಭಾವದಿಂದ ಭಾನುವಾರ ದಿನವಿಡೀ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ತಿರುವಣ್ಣಾಮಲೈನ ಅಣ್ಣಾಮಲೈಯಾರ್ ಬೆಟ್ಟದತಪ್ಪಲಿನಲ್ಲಿರುವ ವಿಒಸಿ ನಗರದಲ್ಲಿ ಭೂಕುಸಿತಸಂಭವಿಸಿದ್ದು, ಹಲವಾರು ಮನೆಗಳಿಗೆ ಹಾನಿ ಯಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ಕೃಷ್ಣಗಿರಿಯಲ್ಲಿ ಮಳೆ ಅಬ್ಬರದಿಂದಾಗಿ ರಸ್ತೆಯಲ್ಲಿ ಹರಿದ ನೀರಿನ ರಭಸಕ್ಕೆ 20 ವಾಹನಗಳು ಕೊಚ್ಚಿಹೋಗಿವೆ. ಪ್ರಮುಖ ರಸ್ತೆಯಲ್ಲಿ ಜಲಪ್ರಳಯವಾಗಿದ್ದು, ಅದರಿಂದಾಗಿ ವಾಹನಗಳು ಕೊಚ್ಚಿಹೋದ ಪರಿಣಾಮ ಸವಾರರು ದಿಗ್ಬ್ರಾಂತರಾಗಿದ್ದಾರೆ.ಫೆಂಗಲ್ ಚಂಡಮಾರುತವು ಕೇವಲ ತಮಿಳುನಾಡಷ್ಟೇ ಅಲ್ಲ ಕರ್ನಾಟಕ, ಆಂಧ್ರಪ್ರದೇಶದ ಜನರಲ್ಲೂ ಆತಂಕ ಸೃಷ್ಟಿಸಿದೆ. ಮೊದಲು ಚಂಡಮಾರುತವು ಪುದುಚೇರಿ ಕರಾವಳಿಗೆ ಅಪ್ಪಳಿಸಿದೆ. ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದ ಒಳನಾಡಿನ ಹಲವಾರು ಭಾಗಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ, ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ 2 ಮತ್ತು 3 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.4,153 ದೋಣಿಗಳು ದಡಕ್ಕೆ ಮರಳಿವೆ ಮತ್ತು ಅಗತ್ಯವಿದ್ದರೆ 2,229 ಪರಿಹಾರ ಶಿಬಿರಗಳು ಬಳಕೆಗೆ ಸಿದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.