ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ಗೆ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ತಾಯ್ನಾಡಿಗೆ ಮರಳಿದ್ದಾರೆ. ಭಾರತಕ್ಕೆ ಆಗಮಿಸಿದ ವಿನೇಶ್ ಅವರನ್ನು ಆಪ್ತರು ಮತ್ತು ಅಭಿಮಾನಿಗಳು ಬರದಿಂದ ಸ್ವಾಗತಿಸಿದ್ದಾರೆ. ಅದರಲ್ಲೂ ಫೋಗಟ್ ಅವರ ಗ್ರಾಮಸ್ಥರು ತಮ್ಮ ನಾಡಿನ ಸಾಧಕಿಯನ್ನು ವಿಶೇಷ ಸಮಾರಂಭದ ಮೂಲಕ ಸನ್ಮಾನಿಸಿದ್ದಾರೆ. ಇದೇ ವೇಳೆ ಅವರಿಗೆ ಚಿನ್ನದ ಪದಕವನ್ನು ನೀಡಿದ್ದು ವಿಶೇಷವಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 50 ಕೆಜಿ ತೂಕದ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ಗೆ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ನಡೆದ ತೂಕ ಪರಿಶೀಲನೆ ವೇಳೆ ಅನುಮತಿಸಲಾದ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ಇದೇ ಕಾರಣದಿಂದಾಗಿ ವಿನೇಶ್ಗ ಫೋಟ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಫೈನಲ್ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಈ ಮನವಿಯನ್ನು ಸಿಎಎಸ್ ವಜಾಗೊಳಿಸಿದೆ. ಇದರೊಂದಿಗೆ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಅವರ ಕನಸು ಕೂಡ ಭಗ್ನಗೊಂಡಿದೆ.
ಈ ನೋವಿನಲ್ಲೇ ಭಾರತಕ್ಕೆ ಹಿಂತಿರುಗಿದ್ದ ವಿನೇಶ್ ಫೋಗಟ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅಲ್ಲದೆ ಸ್ವಗ್ರಾಮ ಬಾಳಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಫೋಗಟ್ ಅವರಿಗೆ ಖಾಪ್ ಪಂಚಾಯತ್ ಮುಖ್ಯಸ್ಥ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.