ಕೋಲ್ಕತ್ತಾ: ಬಾಂಗ್ಲಾದೇಶದ ನುಸುಳುಕೋರರು ಭಾರತ ಪ್ರವೇಶಿಸಲು ಗಡಿ ಭದ್ರತಾ ಪಡೆ(ಬಿಎಸ್ಎಫ್) ಅವಕಾಶ ನೀಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳವನ್ನು ಅಸ್ಥಿರಗೊಳಿಸಲು ಬಿಎಸ್ಎಫ್ ಪ್ರಯತ್ನಿಸುತ್ತಿದೆ. ಬಿಎಸ್ಎಫ್ನ ಈ ವರ್ತನೆಯ ಹಿಂದೆ ಕೇಂದ್ರ ಸರ್ಕಾರದ ನೀಲನಕ್ಷೆಯನ್ನು ನಾನು ಗ್ರಹಿಸಬಲ್ಲೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನುಸುಳುಕೋರರು ಇಸ್ಲಾಂಪುರ, ಸೀತಾಯ್, ಚೋಪ್ರಾ ಮತ್ತು ಇತರ ಹಲವಾರು ಗಡಿ ಪ್ರದೇಶಗಳ ಮೂಲಕ ಭಾರತಕ್ಕೆ ಪ್ರವೇಶಿಸಲು ಬಿಎಸ್ಎಫ್ ಅವಕಾಶ ನೀಡುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಬಿಎಸ್ಎಫ್ ಸಹ ಜನರನ್ನು ಹಿಂಸಿಸುತ್ತಿದೆ ಮತ್ತು ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ರಾಜ್ಯ ಸಚಿವಾಲಯದಲ್ಲಿ ನಡೆದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ತಿಳಿಸಿದ್ದಾರೆ.
ಇದರ ಹಿಂದೆ ಕೇಂದ್ರ ಸರ್ಕಾರದ ನೀಲನಕ್ಷೆ ಇದೆ. ಗೂಂಡಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿ ನಾನು ಶಾಂತಿಯನ್ನು ಬಯಸುತ್ತೇನೆ, ನಾವು ನೆರೆಯ ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ,” ಎಂದು ಅವರು ಹೇಳಿದ್ದಾರೆ.
ನುಸುಳುಕೋರರು ಎಲ್ಲೆಲ್ಲಿ ತಂಗಿದ್ದಾರೆ ಎಂಬುದನ್ನು ಪತ್ತೆ ಮಾಡುವಂತೆ ಡಿಜಿಪಿ ರಾಜೀವ್ ಕುಮಾರ್ ಅವರಿಗೆ ಸೂಚಿಸಿದ ಮಮತಾ, ಕೇಂದ್ರಕ್ಕೆ ಗಟ್ಟಿಯಾದ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
“ಅವರು (ಬಿಎಸ್ಎಫ್) ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯವನ್ನು ಪ್ರವೇಶಿಸಿದ ನಂತರ ಈ ನುಸುಳುಕೋರರು ಎಲ್ಲಿ ಉಳಿದುಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಾನು ಡಿಜಿಪಿಗೆ ಸೂಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ.