ರಾಮನಗರ: ನಗರದ ಕಾಂಗೂರು ಕೇರ್ ಆಸ್ಪತ್ರೆಯಲ್ಲಿ ಫೆ.22 ಮತ್ತು 23ರಂದು ಬಂಜೆತನ ನಿವಾರಣೆ ಮತ್ತು ಉಪಚಾರ ಉಚಿತ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆ ಸಿಇಒ ಡಾ.ಶೇಖರ್ ಸುಬ್ಬಯ್ಯ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮತ್ತು ಮೈಸೂರು ನಂತರ ರಾಮನಗರ ಆಸ್ಪತ್ರೆಯಲ್ಲಿಯೂ ಫರ್ಟಿಲಿಟಿ ಸೆಂಟರ್ ಪ್ರಾರಂಭಿಸಲಾಗಿದೆ. ಶಿಬಿರ ದಲ್ಲಿ ದಂಪತಿಗಳಿಗೆ ಉಚಿತವಾಗಿ ತಪಾಸಣೆ ನಡೆಯಲಿದ್ದು, ಆನಂತರ ಆಸ್ಪತ್ರೆಯಲ್ಲಿ ನಿಗದಿ ಶುಲ್ಕದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಅನೇಕ ದಂಪತಿಗಳಿಗೆ ಸಂತಾನವಾಗದಿರಲು ಆಂತರಿಕ ಸಮಸ್ಯೆಗಳು ಇರುತ್ತವೆ. ಆಧುನಿಕ ಜೀವನ ಶೈಲಿ, ಬದುಕಿನ ಒತ್ತಡಗಳಿಂದಾಗಿ ಯುವಜನರ ದೇಹದಲ್ಲಿ ಸಂತಾನೋತ್ಪತ್ತಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿವೆ.ಬಂಜೆತನ ಸಂಬಂಧಿತ ಸಮಸ್ಯೆಗಳಿದ್ದವರಿಗೆ ಸೂಕ್ತ ಸಲಹೆ ನೀಡುವುದು ಶಿಬಿರದ ಉದ್ದೇಶ. ಏನೇ ಸಮಸ್ಯೆ ಇದ್ದರೂ ಆಧುನಿಕ ವೈಜ್ಞಾನಿಕ ಯುಗದಲ್ಲಿ ಸ್ತ್ರೀ – ಪುರುಷರಿಗೆ ಸಂತಾನ ಪಡೆಯಲು ಹಲವು ಅವಕಾಶಗಳಿವೆ ಎಂದು ಹೇಳಿದರು.
ಸಾಮಾನ್ಯವಾಗಿ ದಂಪತಿಗಳು ಮಕ್ಕಳನ್ನು ಪಡೆಯುವ ಆಸೆಯಿಂದ ಬೆಂಗಳೂರಿಗೆ ಬಂದು ಸರಿಯಾದ ಚಿಕಿತ್ಸೆ ಸಿಗದೆ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ. ಅಂತಹ ದಂಪತಿಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕಾಂಗೂರು ಕೇರ್ ಆಸ್ಪತ್ರೆಯಲ್ಲಿ ಫರ್ಟಿಲಿಟಿ ಸೆಂಟರ್ ಆರಂಭಿಸಿದ್ದೇವೆ. ಇಲ್ಲಿ ನಿಗದಿ ಪಡಿಸದಷ್ಟು ಶುಲ್ಕದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದರು.
ನಮ್ಮ ಆಸ್ಪತ್ರೆಯಲ್ಲಿ ಬೆಂಗಳೂರಿನ ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ಶೇ.30 ರಷ್ಟು ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ. ಹೆಚ್ಚು ಲಾಭಗಳಿಸುವ ಉದ್ದೇಶವಿಲ್ಲದೆ, ಆರ್ಥಿಕವಾಗಿ ಸುಸ್ಥಿರವಾಗಲು ಬೇಕಾದ ಪ್ರಮಾಣಕ್ಕಷ್ಟೆ ಸೇವಾ ಶುಲ್ಕಗಳನ್ನು ಪಡೆಯುತ್ತೇವೆ ಎಂದು ಡಾ.ಶೇಖರ್ ಸುಬ್ಬಯ್ಯ ಹೇಳಿದರು.
ಬಂಜೆತನ ತಜ್ಞರಾದ ಡಾ.ಪಲ್ಲವಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ನೂರು ದಂಪತಿಗಳ ಪೈಕಿ 15 ದಂಪತಿಯಲ್ಲಿ ಬಂಜೆತನ ಕಂಡು ಬರುತ್ತಿದೆ. ರಾಮನಗರದ ಬಹಳಷ್ಟು ದಂಪತಿ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತಹ ದಂಪತಿಗಳಿಗೆ ಸ್ಥಳಿಯವಾಗಿಯೇ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲೂ ಬಂಜೆತನ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಯಲ್ಲ. ಈ ಹಿನ್ನೆಲೆಯಲ್ಲಿ ಫಲವತ್ತತೆ ಸಮಸ್ಯೆ ನಿವಾರಣೆ ಮತ್ತು ಈ ಬಗ್ಗೆ ಸಮೂಹದಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಈವರೆಗೆ ಫಲವತ್ತತೆ ಚಿಕಿತ್ಸೆಗಾಗಿ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ತೆರಳಬೇಕಿತ್ತು. ಆದರೆ ಇದೀಗ ಈ ಸೇವೆ ಕೈಗೆಟುಕವ ದರದಲ್ಲಿ ರಾಮನಗರದಲ್ಲೇ ಲಭ್ಯವಾಗುತ್ತಿದೆ. ಅನಗತ್ಯ ಪ್ರಯಾಣ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. ಆಸ್ಪತ್ರೆ ವೈದ್ಯ ಸಂತೋಷ್ ಇದ್ದರು.