ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದೇ ಕಡೆಯ ದಿನವಾಗಿದೆ. ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದಾಗಿದೆ.ಈಗಾಗಲೇ ಸಾಕಷ್ಟು ಮಂದಿ ಬಿಜೆಪಿ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯಗಾರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ದಾವಣಗೆರೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿರುವ ಸಾಧಿಕ್ ಪೈಲ್ವಾನ್ ಅವರನ್ನು ಮನವೊಲಿಸಿ ಅವರ ನಾಮಪತ್ರ ಹಿಂದಕ್ಕೆ ಪಡೆಯಲು ಮನವೊಲಿಕೆ ಕಾರ್ಯ ನಡೆಸಲಾಗುತ್ತಿದೆ. ಖುದ್ದಾಗಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಶಾಮನೂರು ಸಮರ್ಥ್ ಅವರ ಪರವಾಗಿ ನಾಮಪತ್ರ ಹಿಂತೆಗೆಸಲು ಕಸರತ್ತು ನಡೆಸುತ್ತಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಬಂಡಾಯವಾಗಿರುವ ಸಾದಿಕ್ ಅವರನ್ನು ನಾಮಪತ್ರ ಹಿಂಪಡೆಯುವAತೆ ಕಾಂಗ್ರೆಸ್ ಪಕ್ಷದ ವತಿಯಿಂದ ಸೂಚಿಸಲಾಗಿದೆ. ಆದರೆ ಸಾದಿಕ್ ಅವರು, ಯಾರ ಕೈಗೂ ಸಿಗದೆ ಓಡಾಡುತ್ತಿದ್ದಾರೆ. ಬಿಜೆಪಿ ಮಾತ್ರ ಸಾದಿಕ್ ಅವರು ಕಣದಲ್ಲಿದ್ದರೆ ಸಾಕು ಎಂಬ ಭಾವನೆಯಲ್ಲಿದೆ. ಈಗ ಎಲ್ಲರ ಚಿತ್ತ ಸಾದಿಕ್ ಅವರತ್ತ ನೆಟ್ಟಿದೆ.ಇತ್ತ ಬಾಗಲಕೋಟೆಯಲ್ಲೂ ಪಕ್ಷದ ಅಧಿಕೃತ ಅಭ್ಯರ್ಥಿ ಕಾಂಗ್ರೆಸ್ನ ಉಮೇಶ್ ಮೇಟಿ ವಿರುದ್ಧ ಗೋವಿಂದ ರಾಜ ಬಳ್ಳಾರಿ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಗೋವಿಂದರಾಜ ಬಳ್ಳಾರಿ ಅವರನ್ನು ಮನವೊಲಿಸಿ ಅವರ ನಾಮಪತ್ರವನ್ನು ಹಿಂತೆಗೆಯಲು ಪ್ರಯತ್ನ ಮಾಡಲಾಗುತ್ತಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ಗೋವಿಂದರಾಜು ಅವರ ನಾಮಪತ್ರ ಹಿಂತೆಗೆಸಲು ಖುದ್ದಾಗಿ ಕಸರತ್ತು ನಡೆಸಿದ್ದಾರೆ.



