ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದೇ ಇಲ್ಲ. ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಲಹಂಕದ ಕೋಗಿಲು ಬಳಿ ಇರುವ ಬಸನಗೌಡ ದದ್ದಲ್ ವಿಲ್ಲಾದಲ್ಲಿ ಸದ್ಯ ಇಬ್ಬರು ಮನೆ ಕೆಲಸದವರು ಮಾತ್ರ ಇದ್ದಾರೆ. ದದ್ದಲ್ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮನೆ ಕೆಲಸದವರು ಮಾಹಿತಿ ನೀಡಿದ್ದಾರೆ. ಯಾವಾಗ ವಾಪಸ್ ಬರುತ್ತಾರೆ ಎಂದು ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.
ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಭೀತಿ ಎದುರಿಸುತ್ತಿರುವ ದದ್ದಲ್, ತಮ್ಮನ್ನು ಬಂಧಿಸುವಂತೆ ವಿಶೇಷ ತನಿಖಾ ತಂಡದ ಬಳಿ ಶುಕ್ರವಾರ ಮನವಿ ಮಾಡಿದ್ದರು. ಈ ಮೂಲಕ ಇಡಿ ಬಂಧನದಿಂದ ತಪ್ಪಿಸಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಎಸ್ಐಟಿ ಅವರನ್ನು ಬಂಧಿಸಿಲ್ಲ. ಇದಾದ ನಂತರ ಅವರು ಅಜ್ಞಾತ ತಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.