ನವದೆಹಲಿ: 2047ಕ್ಕೆ ಬಡತನ ಮುಕ್ತ ಭಾರತವನ್ನಾಗಿಸುವ ಗುರಿಯೊಂದಿಗೆ ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಅವರು ಇಂದು 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.ಆರಂಭದಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದರೂ ಗದ್ದಲದ ಮಧ್ಯೆಯೇ ತಮ್ಮ ಬಜೆಟ್ ಭಾಷಣವನ್ನು ಮುಂದುವರಿಸಿದ್ದಾರೆ.
ಇಂದು ಬೆಳಿಗ್ಗೆ ಬಜೆಟ್ ಮಂಡನೆಗೂ ಮುನ್ನಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದ ನಿರ್ಮಲಾಸೀತಾರಾಮನ್ ನಂತರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತಾವು ಸಿದ್ದಪಡಿಸಿದ್ದ ಬಜೆಟ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದರು.ನಿಗಧಿತ ಸಮಯಕ್ಕೆ ಲೋಕಸಭೆಯಲ್ಲಿ ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಗದ್ದಲ ನಡೆಸಲು ಆರಂಭಿಸಿದರು.
ಲೋಕಸಭಾ ಅಧ್ಯಕ್ಷ ಓಂಬಿರ್ಲಾ ಅವರು ಪ್ರತಿಪಕ್ಷಗಳನ್ನು ಸಮಾಧಾನಪಡಿಸುವ ಯತ್ನ ನಡೆಸಿದರೂ ಪ್ರಯೋಜನವಾಗದ ಕಾರಣ ನಿರ್ಮಲಾ ಅವರಿಗೆ ಬಜೆಟ್ ಓದಲು ಅನುಮತಿ ನೀಡಿದರು.ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದ ಸಚಿವರು, 2047ರೊಳಗೆ ಬಡತನಮುಕ್ತ ಭಾರತ ಗುರಿ ಹೊಂದಲಾಗಿದೆ. ಮುಂದಿನ ಐದು ವರ್ಷಗಳ ಸಬ್ಕಾ ವಿಕಾಸ್ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಮಹಿಳೆಯರು ಮಧ್ಯಮ ವರ್ಗದವರು ರೈತಾಪಿ ವರ್ಗಕ್ಕೆ ಆದ್ಯತೆಯನ್ನು ಬಜೆಟ್ನಲ್ಲಿ ನೀಡಲಾಗಿದೆ ಎಂದು ಉಲ್ಲೇಖಿಸಿದ ಕೇಂದ್ರ ವಿತ್ತ ಸಚಿವೆ ಸುದೀರ್ಘವಾಗಿ ತಮ್ಮ ಭಾಷಣವನ್ನು ಲೋಕಸಭೆಯಲ್ಲಿ ಓದಿದರು.