ಬೆಂಗಳೂರು: ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಸಾಮಾನ್ಯ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿರತೆಗಳ ಓಡಾಟ ಕಂಡು ಬಂದಿದ್ದು, ಈ ಬೆಳವಣಿಗೆ ಜನರಲ್ಲಿ ಆತಂಕ ಸೃಷ್ಟಿಸಿದೆ.
ಬೆಂಗಳೂರಿನ ತುರಹಳ್ಳಿ ಫಾರೆಸ್ಟ್ ಪಕ್ಕದ ಬನಶಂಕರಿ 6ನೇ ಹಂತದ ಫಸ್ಟ್ ಬ್ಲಾಕ್ನಲ್ಲಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. ಈ ಚಿರತೆಗಳು 3 ತಿಂಗಳಲ್ಲಿ 10ಕ್ಕೂ ಹೆಚ್ಚು ನಾಯಿ, ಮೇಕೆ, ಕುರಿಯನ್ನು ಕೊಂದಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಬನಶಂಕರಿಯ ನಿವಾಸಿ ಪ್ರಕಾಶ್ ಆರ್ಎಂ ಎಂಬುವವರು ಮಾತನಾಡಿ, ನೆರೆಮನೆಯವರು ಚಿರತೆ ಓಡಾಡುತ್ತಿರುವುದನ್ನು ನೋಡಿದ್ದಾರೆ. ಅವರು ಹೇಳಿದಾಗ ಮೊದಲಿಗೆ ನಾನು ನಂಬಲಿಲ್ಲ. ಆದರೆ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ, ನಿಜವೆಂಬುದು ತಿಳಿಯಿತು. ಇದೀಗ ಸೂರ್ಯ ಮುಳುಗುತ್ತಿದ್ದಂತೆ ಹೊರಗೆ ಹೋಗಲು ಭಯ ಶುರುವಾಗಿದೆ ಎಂದು ಹೇಳಿದ್ದಾರೆ.
ಬನಶಂಕರಿ 6ನೇ ಹಂತದ ನಿವಾಸಿ ಕಲ್ಯಾಣ ಸಂಘದ ಅಧ್ಯಕ್ಷ ಟಿ.ಎಸ್. ಮಹೇಶ ಅವರು ಮಾತನಾಡಿ, ಬನಶಂಕರಿ 6ನೇ ಹಂತ ತುರಹಳ್ಳಿ ಅರಣ್ಯದ ಪಕ್ಕದಲ್ಲಿರುವುದರಿಂದ ಚಿರತೆಗಳು ಆಗಾಗ್ಗೆ ವಸತಿ ಪ್ರದೇಶಕ್ಕೆ ಬಂದು, ನಂತರ ಕಾಡಿಗೆ ಹಿಂತಿರುಗುತ್ತವೆ. ಚಿರತೆ ಕಾಣಿಸಿಕೊಂಡ ಬಗ್ಗೆ ನಾವು ಕಗ್ಗಲಿಪುರ ಅರಣ್ಯ ವಿಭಾಗಕ್ಕೆ ದೂರು ನೀಡಿದ್ದೇವೆಂದು ತಿಳಿಸಿದರು.
ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ರವೀಂದ್ರ ಅವರು ಮಾತನಾಡಿ, ಚಿರತೆ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿರುವ ಯಾವುದೇ ಫೋಟೋ ಅಥವಾ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಪಾರ್ಟ್ಮೆಂಟ್ ಕಿಟಿಯಿಂದ ನೋಡಿದಾಗ ತುರಹಳ್ಳಿ ಅರಣ್ಯದ ಬಂಡೆಯ ಮೇಲೆ ಚಿರತೆ ಕುಳಿತಿರುವುದು ಕಂಡು ಬಂದಿತ್ತು. 15 ದಿನಗಳ ಹಿಂದೆ ಈ ಚಿರತೆ ಕಂಡು ಬಂದಿತ್ತು. ಅದು ಗಂಡು ಚಿರತೆಯಾಗಿತ್ತು ಎಂದು ಹೇಳಿದ್ದಾರೆ.
ಚಿರತೆ ತನ್ನ ಮರಿಗಳೊಂದಿಗೆ ಓಡಾಡತ್ತಿರುವಾಗ ನಾಗರೀಕರು ಭಯಭೀತರಾಗಬಾರದು ಹಾಗೂ ಅವುಗಳಿಗೆ ತೊಂದರೆ ನೀಡಬಾರದು, ಅವು ತಾವಾಗಿಯೇ ಅರಣ್ಯಕ್ಕೆ ಮರಳುತ್ತವೆ ಎಂದು ಮತ್ತೊಬ್ಬ ಅರಣ್ಯಾಧಿಕಾರಿ ಹೇಳಿದ್ದಾರೆ.
ಚಿರತೆ ಮರಿಗಳು ಕಂಡು ಬಂದಾಗ ಜನರು ಅವುಗಳನ್ನು ಎತ್ತಿಕೊಳ್ಳುವುದು, ಮುಟ್ಟುವುದು ಮಾಡಬಾರದು ಎಂದು ಸ್ಥಳೀಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಚಿರತೆಗಳ ಹೆಜ್ಜೆ ಗುರುತುಗಳು ಹಾಗೂ ಇತರೆ ಚಿಹ್ನೆಗಳನ್ನು ಹಿಡಿದು ಅವುಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.