ಬೆಂಗಳೂರು: ರಾಷ್ಟ್ರೀಯ ಬಸವತತ್ವ ಪರಿಷತ್ತಿನ ವತಿಯಿಂದ ೮೦ನೇ ತಿಂಗಳ ಶರಣ ಸಂಗಮ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದ ಡಾ.ಎಂ.ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ದೊಡ್ಡಬಳ್ಳಾಪುರ ಶ್ರೀಮದ್ ದಾಸೋಹ ಸಂಸ್ಥಾನ, ಬಸವೇಶ್ವರ ಮಹಾಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅವರು ಮಾತನಾಡಿ, ಕನ್ನಡಕ್ಕೆ ಎಷ್ಟು ಮಹತ್ವವಿದೆಯೋ, ಬಸವಣ್ಣನವರು ಕನ್ನಡಕ್ಕೆ ಕೊಟ್ಟಂತಹ ಕೊಡುಗೆಗಳು ಅಷ್ಟೇ ದೊಡ್ಡದು ಎಂದರು.
ಬಸವಣ್ಣನವರ ಪ್ರತಿಯೊಂದು ವಚನಗಳ ಸಾರಗಳು, ಪ್ರತಿಯೊಂದು ಪದಗಳು ಜೀವನದ ಸಾರ್ಥಕತೆಯೆಡೆಗೆ, ಜೀವನದ ಮೌಲ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ ಎಂದೂ ಅವರು ಹೇಳಿದರು.
ಕನ್ನಡಸಿರಿಗೆ ಬಸವಣ್ಣನವರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದ ಯಶವಂತಪುರದ ಬಾಪು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಂ.ಮಂಜುನಾಥ್ ಅವರು,೧೨ನೇ ಶತಮಾನದಲ್ಲಿ ನಡೆರುವಂತಹ ವಚನ ಚಳವಳಿ ಮತ್ತು ಸಾಹಿತ್ಯ ಇವತ್ತಿಗೂ ಪ್ರಸ್ತುತ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ತಾಯ್ನಾಡು ರಾಘವೇಂದ್ರ ಅವರು ಮಾತನಾಡಿ, ಬೆಂಗಳೂರಿನಂತಹ ಮಹಾ ನಗರದಲ್ಲಿ ಎಲ್ಲರನ್ನೂ ಸಂಘಟಿಸಿ ಇಂತಹದೊಂದು ಕಾರ್ಯಕ್ರಮ ಮಾಡುವುದು ಅಷ್ಟು ಸುಲಭ ಸಾಧ್ಯವಾದುದಲ್ಲ. ಯುವ ಜನರು ಬಸವತತ್ವ ಪ್ರಸಾರದ ಇಂತಹ ಕಾರ್ಯಕ್ರಮ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಎಸ್ಬಿಐನ ನಿವೃತ್ತ ಮುಖ್ಯ ವ್ಯವಸ್ಥಾಪಕ ಹಾಗೂ ವಿಜಯನಗರದ ಗುಲಾಬಿ ನಗೆ ಕೂಟದ ಹಿರಿಯ ಸದಸ್ಯ ಎಸ್.ಆರ್.ಜಗನ್ನಾಥ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪ್ರತಿ ತಿಂಗಳು ನಡೆಯುವ ಶರಣ ಸಂಗಮ ಕಾರ್ಯಕ್ರಮ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಆಶ್ರಯ ಗ್ರೂಪ್ ಪಿಜಿ ಹಾಗೂ ಪರಿಷತ್ತಿನ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ಕಾರ್ಯಕ್ರಮದ ಯಶಸ್ಸಿನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ವಿಜಯನಗರದ ಶೈಲಜಾ ಮತ್ತು ತಂಡದವರು ಹಾಗೂ ಜೈ ಮಾರುತಿ ನಗೆಕೂಟದ ಸದಸ್ಯರು ಸುಶ್ರಾವ್ಯವಾಗಿ ಹಾಡಿದ ಕನ್ನಡ ಗೀತೆ ಮತ್ತು ವಚನ ಗಾಯನ ಕಾರ್ಯಕ್ರಮ ಸಭಿಕರ ಮನ ಸೆಳೆಯಿತು.