ಗದಗ: ಹಾಲಕೆರೆ ಅನ್ನದಾನೇಶ್ವರ ಮಠದಲ್ಲಿ ಒಂದು ತಿಂಗಳ ಕಾಲ ನಡೆಯುವ ‘ಬಸವ ಪುರಾಣ’ ಪ್ರವಚನ ಹಾಗೂ ಇತರೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವಂತೆ ಮುಸ್ಲಿಮರಿಗೆ ಆಹ್ವಾನ ನೀಡಲಾಗಿದೆ.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಾಲಕೆರೆ ಅನ್ನದಾನೇಶ್ವರ ಮಠ ಗಜೇಂದ್ರಗಡ-ಹಾಲಕೆರೆ ವತಿಯಿಂದ ಆಯೋಜಿಸಿರುವ ಬಸವ ಪುರಾಣ ಅಂಗವಾಗಿ ಜರುಗಿದ ಸಭೆಯಲ್ಲಿ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮುಸ್ಲಿಮರಿಗೆ ಆಹ್ವಾನ ನೀಡಿದರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬ್ರಿಟಿಷರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿದರು, ಇದೀಗ ಮಠವು ಇಂತಹ ಕಾರ್ಯಕ್ರಮಗಳ ಮೂಲಕ ವಿಭಜನೆಗೊಂಡ ಜನರನ್ನು ಒಗ್ಗೂಡಿಸಲು ಬಯಸಿದೆ ಎಂದು ಹೇಳಿದರು.
ಟಕ್ಕೇದ ದರ್ಗಾದ ಸೈಯದ್ ನುಜಾಮುದ್ದೀನ ಶಾ ಮಕಾನದಾರ ಮಾತನಾಡಿ, ಹಾಲಕರೆಯ ಅಭಿನವ ಅನ್ನದಾನ ಸ್ವಾಮೀಜಿಗಳು ಪಟ್ಟಣದ ಟಕ್ಕೇದ ದರ್ಗಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮ ಸಮಾಜದ ಆಶಯ ಹಾಗೂ ಶಿಕ್ಷಣ ಮಹತ್ವ ಸಾರಿದ್ದರು. ಮಠದ ಕೆಲ ಕಾರ್ಯಕ್ರಮಗಳಿಗೂ ಸಹ ಟಕ್ಕೇದ ದರ್ಗಾದ ಪೂಜ್ಯರು ಸಹ ತೆರಳಿದ್ದರೆಂದು ಸ್ಮರಿಸಿದರು.