ಆಲಪ್ಪುಳ: ಕೇರಳದ ಆಲಪ್ಪುಳದಲ್ಲಿ ಸಾರಿಗೆ ಬಸ್ಗೆ ಕಾರು ಡಿಕ್ಕಿ ಹೊಡೆದು ಐವರು ಯುವಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕಳರ್ಕೋಡ್ ಬಳಿ ಅವಘಡ ಸಂಭವಿಸಿದೆ. ಮೃತರು ಸರ್ಕಾರಿ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ. ಲಕ್ಷದ್ವೀಪ್ನ ದೇವಾನಂದನ್ ಮತ್ತು ಮುಹಮ್ಮದ್ ಇಬ್ರಾಹಿಂ , ಆಯುಷ್ ಶಾಜಿ, ಶ್ರೀದೀಪ್ ವಲ್ಸನ್ ಮತ್ತು ಮುಹಮ್ಮದ್ ಜಬ್ಬಾರ್ ಮೃತ ದುರ್ದೈವಿಗಳು.
ಕಾರಿನಲ್ಲಿ ಒಟ್ಟು ಏಳು ಮಂದಿ ಇದ್ದರು, ಈ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ವಾಹನ ಒಡೆದು ಒಳಗಿದ್ದ ಯುವಕರನ್ನು ಹೊರ ತೆಗೆಯಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.