ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಚಾಲನೆ ವೇಳೆ ಚಾಲಕನಿಗೆ ಫಿಟ್ಸ್ ಕಾಣಿಸಿಕೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ಡಿ. 25 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಡಕಶಿರದ ಮಾರುತಿನಗರದ ಬಳಿ ನಡೆದಿದೆ. ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಸ್ಪಲ್ಪ ಯಾಮಾರಿದ್ದರೆ ಹತ್ತಾರು ಅಮಾಯಕರ ಪ್ರಾಣ ಹೋಗುತ್ತಿತ್ತು. ಘಟನೆಯಲ್ಲಿ ಓರ್ವ ರೈತನಿಗೆ ತೀವ್ರ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನೆಲಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ KA-57F4409 ನಂಬರ್ ಕೆಎಸ್ಆರ್ಟಿಸಿ ಬಸ್ ಪಾವಗಡ ಟು ಬೆಂಗಳೂರಿಗೆ ಸಂಚರಿಸುತ್ತಿತ್ತು. ಚಾಲಕ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದನಂತೆ. ಅಪಘಾತದ ವೇಳೆ ಚಾಲಕನಿಗೆ ಫಿಟ್ಸ್ ಬಂದಿತ್ತಂತೆ. ಈ ವೇಳೆ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು, ಒಂದು ಗೂಡ್ಸ್ ಆಟೋ ಮತ್ತು ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರೈತ ನಾರಾಯಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಕೆಎಸ್ಆರ್ಟಿಸಿಯಿಂದ ಒಬ್ಬರೇ ಒಬ್ಬರು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಒಂದು ರೂ ಕೂಡ ಪರಿಹಾರ ನೀಡಿಲ್ಲವಂತೆ. ಸದ್ಯ ಮಡಕಶಿರ ಪೋಲಿಸರು ಎಫ್ಐಆರ್ ದಾಖಲಿಸಿ ಬಸ್ ವಶಕ್ಕೆ ಪಡೆದುಕೊಂಡಿದ್ದಾರೆ.