ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ನಾಯಕರ ದಂಡು ಧಾವಿಸಿತು. ಸಾರಿಗೆ ನಿಗಮಗಳ ಬಸ್ ಪ್ರಯಾಣ ಶೇಕಡ 15ರಷ್ಟು ಹೆಚ್ಚಳ ಖಂಡಿಸಿ, ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಬಿಜೆಪಿ ನಾಯಕರು ವಿಶಿಷ್ಟವಾಗಿ ಪ್ರತಿಭಟಿಸಿದರು.
ಕಾಂಗ್ರೆಸ್ ಸರ್ಕಾರ ಗುರುವಾರ ಎಲ್ಲಾ ವರ್ಗಗಳ ಸರ್ಕಾರಿ ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು. ಭಾನುವಾರದಿಂದಲೇ ನೂತನ ದರ ಜಾರಿಗೆ ಬರಲಿದೆ. ಇದರಿಂದ ಮಾಸಿಕವಾಗಿ 74.85 ಕೋಟಿ ಮತ್ತು ವಾರ್ಷಿಕ ರೂ 784 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮೆಜೆಸ್ಟಿಕ್ನಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಧರಣಿ ನಡೆಸಿದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟ ನಾಯಕರು ತಮ್ಮ ಪ್ರತಿಭಟನೆಯ ಉದ್ದೇಶ ಮನವರಿಕೆ ಮಾಡಿಕೊಟ್ಟರು.
ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನೇರವಾಗಿ ಪುರುಷ ಪ್ರಯಾಣಿಕರ ಬಳಿಗೆ ತೆರಳಿ ಗುಲಾಬಿ ಹೂ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೆಲೆ ಏರಿಕೆಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಸರ್ಕಾರ, ಬಸ್ ದರ ಏರಿಸಿ ಪುರುಷ ಪ್ರಯಾಣಿಕರಿಗೆ ಬರೆ ಹಾಕಿದೆ. ಇದಕ್ಕಾಗಿ ಸರ್ಕಾರವಂತೂ ಕ್ಷಮೆ ಕೇಳುವುದಿಲ್ಲ. ಪ್ರತಿಪಕ್ಷವಾಗಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಪ್ರವೇಶಿಸುತ್ತಿದ್ದ ವೇಳೆ ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ನಾಯಕ ಆರ್. ಅಶೋಕ್ ವಶಕ್ಕೆ ಪಡೆದರೆ ಕೋರ್ಟ್ ಗೆ ಹೋಗುವೆ. ನಾವು ಪ್ರತಿಭಟನೆ ಮಾಡಲು ಬಂದಿಲ್ಲ. ಪ್ರಯಾಣಿಕರಿಗೆ ಹೂವು ಕೊಡಲು ಬಂದಿದ್ದೆನೆ. ಹೊಡಿಯುತ್ತೀಯಾ, ಹೊಡಿ, ಹೊಡಿ, ಏಯ್ ನಾನು ವಿರೋಧ ಪಕ್ಷದ ನಾಯಕ, ನನ್ನನ್ನು ಮುಟ್ಟಿದರೆ ಹುಷಾರ್. ಜನ್ಮದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೆ ಮಾಡುವೆ ಎಂದು ಕಿಡಿಕಾರಿದರು.