ಮಂಡ್ಯ: ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ನೇರವಾಗಿ ಪಕ್ಷ ಆಯ್ಕೆ ಮಾಡಿಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಅವರನ್ನ ಸಿಎಂ ಮಾಡಿದ್ದಾರೆ ಎಂದು ಮಂಡ್ಯದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ಈಗಲೂ ನಮ್ಮ ಪಕ್ಷ ಶಾಸಕರ ಬಹುಮತದ ಅಭಿಪ್ರಾಯಕ್ಕೆ ಬದ್ಧವಾಗಿದೆ. 2013 ರಲ್ಲೂ ವೋಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಾಯ್ತು. ಇದು ನಮ್ಮ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಈಗಲೂ ನಮ್ಮ ಪಕ್ಷ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧವಾಗಿದೆ ಎಂದಿದ್ದಾರೆ.
ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಮಯ ಸಂದರ್ಭ ನೋಡಿ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಾರನ್ನೋ ಓಲೈಕೆಗೆ ಹಾಗೂ ಹೊಗಳಿಕೆಗೆ ಸಿಎಂ ಬದಲಾವಣೆ ವಿಚಾರ ಮಾತನಾಡಬಾರದು. ಮೊದಲನೇ ಬಾರಿ ಆಯ್ಕೆಯಾಗಿ ಬಂದ ಶಾಸಕರು ಬಹಳ ಹಾರಾಡುತ್ತಿದ್ದಾರೆ. ಈ ವಿಚಾರವನ್ನ ಬಹಿರಂಗವಾಗಿ ಮಾತನಾಡದೇ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು.
ಮಂಡ್ಯದಲ್ಲಿ ಅತಿಹೆಚ್ಚು ಕಾಲ ಕಾಂಗ್ರೆಸ್ ಪಕ್ಷ ಕಟ್ಟಿದವನು ನಾನೇ. ನನಗೆ ಅನ್ಯಾಯ ಆಯ್ತು ಅಂತಾ ಬೀದಿಯಲ್ಲಿ ಮಾತನಾಡೋಕೆ ಆಗುತ್ತಾ? ಬೇರೆ ಸಚಿವರಿಗಿಂತಲೂ ಯೋಗ್ಯತೆ, ಅರ್ಹತೆ, ಸೀನಿಯಾರಿಟಿ ನನಗಿದೆ. ಪಕ್ಷದ ತೀರ್ಮಾನವನ್ನು ತಲೆಬಾಗಿ ಒಪ್ಪಿದ್ದೇನೆ. ಅದರಂತೆ ಎಲ್ಲರೂ ಇರಬೇಕು ಎಂದಿದ್ದಾರೆ.