ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರು ಹಾಗೂ ಪ್ರತಿಭಟನಾಕಾರರ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಪರಿಣಾಮ 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಕರೆ ನೀಡಲಾಗಿರುವ ಅಸಹಕಾರ ಚಳುವಳಿಯ ಮೊದಲ ದಿನ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸರ್ಕಾರದ ರಾಜೀನಾಮೆಗೆ ಆಗ್ರಹಿಸಿ ಅಸಹಕಾರ ಚಳುವಳಿಗೆ ಕರೆ ನೀಡಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೆ ಅವಾಮಿ ಲೀಗ್ ನ ಬೆಂಬಲಿಗರು, ಛಾತ್ರಾ ಲೀಗ್ ಹಾಗೂ ಜುಬೋ ಲೀಗ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.ಇದುವರೆಗೆ ಬಾಂಗ್ಲಾದೇಶದಾದ್ಯಂತ 13 ಜಿಲ್ಲೆಗಳಲ್ಲಿ ನಡೆದ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಥಮ್ ಅಲೋ ಪತ್ರಿಕೆ ವರದಿ ಮಾಡಿದೆ.
ಪೇನಿಯಲ್ಲಿ ಕನಿಷ್ಠ 5 ಜನರು, ಸಿರಾಜ್ಗಂಜ್ನಲ್ಲಿ 4, ಮುನ್ಷಿಗಂಜ್ನಲ್ಲಿ 3, ಬೋಗುರಾದಲ್ಲಿ 3, ಮಗೂರದಲ್ಲಿ 3, ಭೋಲಾದಲ್ಲಿ 3, ರಂಗ್ಪುರದಲ್ಲಿ 3, ಪಬ್ನಾದಲ್ಲಿ 2, ಸಿಲ್ಹೆಟ್ನಲ್ಲಿ 2, ಕೊಮಿಲ್ಲಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆ ಹೇಳಿದೆ. ಜಾಯ್ಪುರಹತ್ನಲ್ಲಿ ಒಂದು, ಢಾಕಾದಲ್ಲಿ ಒಂದು ಮತ್ತು ಬಾರಿಸಾಲ್ನಲ್ಲಿ ಒಂದು ಸಾವು ವರದಿಯಾಗಿದೆ.
ಪ್ರತಿಭಟನೆ-ಹಿಂಸಾಚಾರ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲು ಗೃಹ ಸಚಿವಾಲಯ ನಿರ್ಧರಿಸಿದೆ. ಸರ್ಕಾರಿ ಏಜೆನ್ಸಿಯೊಂದು ಮೆಟಾ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.4G ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಆಪರೇಟರ್ಗಳಿಗೆ ಆದೇಶಿಸಲಾಗಿದೆ.