ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಾಣಂತಿಯರ ಸಾವು ಪ್ರಕರಣ ಹೆಚ್ಚಳವಾಗುತ್ತಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬುಧವಾರ ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಬಾಣಂತಿಯರ ಸಾವಿನ ಬಗ್ಗೆ ನಿಯಮ 69 ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮೊದಲಿಗೆ ಮಾತನಾಡಿದ ಆರ್.ಅಶೋಕ್ ಅವರು, ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸುವ ಘಟನೆ ಇದಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಇದರ ಜತೆಗೆ ಚಿತ್ರದುರ್ಗ, ರಾಯಚೂರು, ಬೆಳಗಾವಿ, ಪಾವಗಡ ಹಲವೆಡೆ ಬಾಣಂತಿಯರು ಸತ್ತಿದ್ದಾರೆ. ಇದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆರೋಗ್ಯ ಇಲಾಖೆ ರೋಗಪೀಡಿತವಾಗಿದೆ. ಸರಿಯಾದ ಔಷಧಿಗಳಿಲ್ಲ. ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಬಾಣಂತಿಯರ ಸಾವಿನ ಬಗ್ಗೆ ಹಾಲಿ ಹೈಕೋರ್ಟ್ನ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಯಾಗಲಿ. ಸತ್ಯ ಜನರಿಗೆ ಗೊತ್ತಾಗಬೇಕಿದೆ ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ನಿರ್ಲಕ್ಷ್ಯ ತೋರಿದ್ದಾರೆ. ಸಾವಾದ 6 ದಿನದ ನಂತರ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ನಾನು ಅವರಿಗಿಂತ ಮೊದಲು ಘಟನೆಯಾದ 3 ದಿನದಲ್ಲೇ ಭೇಟಿ ನೀಡಿದ್ದೆ. ಈ ಘಟನೆಯಲ್ಲಿ ವೈದ್ಯರು ನಮ್ಮದೇನು ತಪ್ಪಿಲ್ಲ. ಐವಿಫ್ಲ್ಯೂಯಿಡ್ ಔಷಧಿಯ ತಪ್ಪು. ಈಗ ವರದಿಯಲ್ಲಿ ಬೇರೆ ಬೇರೆ ರೀತಿ ಇದೆ. ಈ ಹಿಂದೆ ಎಷ್ಟು ಸಾವಾಗಿತ್ತು. ಈಗ ಇಷ್ಟು ಸಾವಾಗಿದೆ ಎಂದೆಲ್ಲಾ ಬಾಣಂತಿಯರ ಸಾವನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಬಾಣಂತಿಯರ ಬದುಕಿಗೆ ಗ್ಯಾರಂಟಿ ಕೊಡಿ. ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಕಳಪೆ ಔಷಧಿ, ಅವಧಿ ಮೀರಿದ ಔಷಧಿಗಳ ವಿಲೇವಾರಿ ಮಾಡದಿರುವುದು, ಎಕ್ಸ್ರೇ ಯಂತ್ರ ಕೆಟ್ಟಿರುವುದು, ಇಸಿಜಿ ಯಂತ್ರ ಕೆಟ್ಟಿರುವುದು ಎಲ್ಲವೂ ಲೋಕಾಯುಕ್ತರು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಬಯಲಾಗಿದೆ. ಬೆಂಗಳೂರಿನ ಆಸ್ಪತ್ರೆಯ ಸ್ಥಿತಿಯೇ ಹೀಗಾದರೆ ಇನ್ನು ಬೇರೆ ಆಸ್ಪತ್ರೆಗಳ ಗತಿಯೇನು ಎಂದು ಪ್ರಶ್ನಿಸಿದರು.
ಈ ಸರ್ಕಾರ ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ ಸಿಲುಕಿದೆ. ಕ್ಯಾನ್ಸರ್ಗೆ ಬಳಸುವ ಔಷಧಿಯನ್ನು ಡ್ರಗ್ಸ್ ರೀತಿಯಲ್ಲಿ ಸೇವಿಸುವ ವಿಡಿಯೋಗಳು ಇವೆ. ಸರ್ಕಾರ ಬದುಕಿದೆಯೋ, ಸತ್ತಿದೆಯೋ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಾಣಂತಿಯರ ಸಾವಿನ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಬೇಕು. ಹಾಗಾಗಿ ನ್ಯಾಯಾಂಗ ತನಿಖೆ ಮಾಡಿ. ಬಾಣಂತಿಯರಿಗೆ ನೆಮ್ಮದಿ ಒದಗಿಸಿ ಎಂದು ಒತ್ತಾಯಿಸಿದರು.