ಬೆಂಗಳೂರು: ಬೆಂಗಳೂರಿನ ಪ್ರಮುಖ ಸಂಚಾರ ಜೀವನಾಡಿಯಾಗಿರುವ ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಜನವರಿ 15 ರಿಂದ 30ರ ತನಕ ‘ನಮ್ಮ ಬಿಎಂಟಿಸಿ’ ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ. ಈ ಸಮಯದಲ್ಲಿ ಅಪ್ಲಿಕೇಶನ್ನಲ್ಲಿ ಯಾವ ಮಾಹಿತಿಯೂ ಸಿಗುವುದಿಲ್ಲ. ಪ್ರಯಾಣಿಕರು ಸಂಸ್ಥೆಯ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಬಿಎಂಟಿಸಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಲು, ಬಸ್ಗಳ ಅಂದಾಜು ಆಗಮನ ಮತ್ತು ನಿರ್ಗಮನ ಸಮಯವನ್ನು ಪಡೆಯಲು ಮತ್ತು ಬಸ್ ವೇಳಾಪಟ್ಟಿಯ ಬಗ್ಗೆ ಮಾಹಿತಿ ಪಡೆಯಲು ‘ನಮ್ಮ ಬಿಎಂಟಿಸಿ’ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರು. ನಗರಕ್ಕೆ ಹೊಸದಾಗಿ ಬರುವ ಜನರಿಗೆ ಈ ಅಪ್ಲಿಕೇಶನ್ ಸಹಾಯಕವಾಗಿದೆ. ಆದರೆ ದತ್ತಾಂಶ ನಿರ್ವಹಣೆ ಕಾರಣಕ್ಕೆ ಜನವರಿ 15 ರಿಂದ 30ರ ತನಕ ‘ನಮ್ಮ ಬಿಎಂಟಿಸಿ’ ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.
ಈ ಸಮಯದಲ್ಲಿ ಬಸ್ಗಳ ಮಾಹಿತಿ, ಯೋಜನೆ, ದರಪಟ್ಟಿ ಸೇರಿದಂತೆ ಯಾವುದೇ ಸೇವೆಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ. ಈ ಅವಧಿಯಲ್ಲಿ ಉಂಟಾದ ಯಾವುದೇ ಅನಾನುಕೂಲತೆಗಾಗಿ ಬಿಎಂಟಿಸಿ ವಿಷಾದಿಸುತ್ತದೆ, ದತ್ತಾಂಶಗಳ ನಿರ್ವಹಣೆ ಪೂರ್ಣಗೊಂಡ ಬಳಿಕ ಅಪ್ಲಿಕೇಶನ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.