ದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ರಾಜ್ಯದ ಲಿಂಗಾಯತರು, ವೀರಶೈವರಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಬಿ.ವೈ. ವಿಜಯೇಂದ್ರ ಪರವೂ ಸಹ ಲಿಂಗಾಯತರು, ವೀರಶೈವರಿಲ್ಲ.ಹಿಂದೊಮ್ಮೆ ಯಡಿಯೂರಪ್ಪ ಪರವಾಗಿ ಸಮುದಾಯ ಕಾಳಜಿ ಹೊಂದಿತ್ತು. ಈಗ ಆ ಪರಿಸ್ಥಿತಿಯಿಲ್ಲ ಎಂದು ಹೇಳಿರುವ ಯತ್ನಾಳ್, ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ವಿಜಯೇಂದ್ರ ಪರ ಕೆಲ ಪೇಮೆಂಟ್ ಸ್ವಾಮಿಗಳು ಇದ್ದಾರೆ ಎಂದು ಆರೋಪಿಸಿದ ಅವರು, ಕುಟುಂಬ ರಾಜಕಾರಣ ಕಿತ್ತೊಗೆಯಬೇಕಿದೆ. ವಿಜಯೇಂದ್ರ ಬಳಿ ಹಣ ಇದೆ. ಹಾಗಾಗಿ ಹಣದ ಮದದಿಂದ ಮಾತನಾಡುತ್ತಾರೆ. ನನಗೆ ರಾಜ್ಯಾಧ್ಯಕ್ಷನಾಗಬೇಕೆಂಬ ಉದ್ದೇಶವಿಲ್ಲ. ಹಿಂದೂಪರ ಇರುವವರು ರಾಜ್ಯಾಧ್ಯಕ್ಷರಾಗಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಡ್ರಾಮಾ ಕಂಪೆನಿ ಆರಂಭಿಸಿದ್ದಾರೆ. ಈಗ ಎಲ್ಲೂ ಹೊರಗೆ ಬರುತ್ತಿಲ್ಲ. ಕಾಣಿಸಿಕೊಳ್ಳುತ್ತಲೂ ಇಲ್ಲ. ಉಷಾರಿಲ್ಲ ಎಂಬ ನಾಟಕ ಆರಂಭಿಸಿದ್ದಾರೆ. ಅವರು 100 ವರ್ಷಗಳ ಕಾಲ ಬಾಳಲಿ. ಆರೋಗ್ಯವಾಗಿರಲಿ. ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳನ್ನು ನೋಡಿಕೊಂಡು ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ.