ಬೆಂಗಳೂರು: ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡಲು ಹೋಗ್ತಿದೆ. ಅವರ ಕಣ್ಣಿಗೆ ಎಲ್ಲವೂ ಹಳದಿ ಬಣ್ಣ ಕಾಣುತ್ತದೆ, ಕಾಮಲೆ ಕಣ್ಣಿನಿಂದ ನೋಡ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ಹಿಂಪಡೆದಿರುವುದಕ್ಕೆ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಅವರು, ಕೆಂಪು, ಹಸಿರು, ನೀಲಿ ಬಣ್ಣ ಬಿಜೆಪಿಯವರ ಕಣ್ಣಿಗೆ ಕಾಣಲ್ಲ ಎಂದು ಗುಡುಗಿದ್ದಾರೆ.ಕೇಸ್ ಗಳನ್ನು ವಾಪಸ್ ಪಡೆಯಲು ಯಾರಾದರೂ ಸರ್ಕಾರಕ್ಕೆ ಮನವಿ ಮಾಡ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ ಮಾಡ್ತೇವೆ, ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತೆ.
ವಾಪಸ್ ತಗೋಬೇಕಾ `ಬೇಡವಾ’ ಅಂತ ಉಪಸಮಿತಿ ನಿರ್ಧರಿಸುತ್ತೆಎಂದ ಅವರು, ಹುಬ್ಬಳ್ಳಿ ಕೇಸ್ ಗಳೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.ನಂತರ ಸಂಪುಟ ಸಭೆಯಲ್ಲಿ ಕೇಸ್ ಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ. ಇದನ್ನು ಕೋರ್ಟಿಗೆ ಕಳಿಸ್ತೇವೆ, ಕೋರ್ಟ್ ಒಪ್ಪಿಕೊಂಡರೆ ಆ ಕೇಸ್ ಗಳು ವಾಪಸ್ ಆಗ್ತವೆ ಎಂದು ತಿಳಿಸಿದ ಅವರು, ಇದರಲ್ಲಿ ಬಿಜೆಪಿ ಇದನ್ನು ಬಿಜೆಪಿ ರಾಜಕೀಯ ಮಾಡ್ತಿದೆ. ಬಿಜೆಪಿ ಸರ್ಕಾರವಿದ್ದಾಗಲೂ ಹಲವು ಕೇಸ್ ಗಳನ್ನು ವಾಪಸ್ ಪಡೆದಿತ್ತು ಎಂದು ಹೇಳಿದರು.
ಯುಪಿಯಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್ ಗಳಿದ್ವು, ಅದನ್ನೆಲ್ಲ ಅವರು ವಾಪಸ್ ಪಡ್ಕೊಂಡ್ರು. ಈಗ ಹುಬ್ಬಳ್ಳಿ ಕೇಸ್ ಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ ಇಲ್ವೋ ಗೊತ್ತಿಲ್ಲ ನಿಯಮಾನುಸಾರ ಕೇಸ್ ಗಳನ್ನು ವಾಪಸ್ ಪಡೆಯಬಹುದು. ಹುಬ್ಬಳ್ಳಿ ಕೇಸ್ ಗಳಲ್ಲಿ ಒಟ್ಟು 56 ಕೇಸ್ ಗಳಲ್ಲಿ 43 ಕೇಸ್ ಗಳನ್ನು ವಾಪಸ್ ಪಡೆಯುವ ತೀರ್ಮಾನ ಆಗಿದೆ ಎಂದು ತಿಳಿಸಿದರು.