ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಸದ್ಯ ಬಿಜೆಪಿ ಪರವಾಗಿ ಹೋಗುತ್ತಿದ್ದು, ಈ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಏರೋದು ಬಹುತೇಕ ಖಚಿತವಾಗಿದೆ.
ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಆಮ್ ಆದ್ಮಿ ಪಕ್ಷ 23 ಸ್ಥಾನಗಳಿಗೆ ಸೀಮಿತವಾಗಿದೆ. ಕಾಂಗ್ರೆಸ್ ತನ್ನ ಖಾತೆಯನ್ನೇ ತೆರೆದಿಲ್ಲ. ಆ ಮೂಲಕ 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರ ನಡೆಸುವ ಲಕ್ಷಣ ಕಾಣುತ್ತಿದ್ದು, ಆಮ್ ಆದ್ಮಿಯ ಪೊರೆಕೆ ಮೂಲೆ ಸೇರೋದು ಪಕ್ಕಾ ಎನ್ನುವಂತಿದೆ.
ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್ ಉಂಟಾಗಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಾರು 600 ಮತಗಳ ಅಂತರದಿಂದ ಸೋತಿದ್ದಾರೆ. ಸೋತ ನಂತರ, ಅವರು ಮತ ಎಣಿಕೆ ಕೇಂದ್ರದಿಂದ ಜಾಗ ಖಾಲಿ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಇಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ದೆಹಲಿಯ ವಿವಿಧ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.