ಲಖನೌ: ಉತ್ತರ ಪ್ರದೇಶದ ಕರ್ಹಾಲ್ ಕ್ಷೇತ್ರದಲ್ಲಿ ದಲಿತ ಮಹಿಳೆಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಸಮಾಜವಾದಿ ಪಕ್ಷದ ಕಾರ್ಯಕರ್ತನೋರ್ವ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸದಂತೆ ಆಕೆಯನ್ನು ಒತ್ತಾಯಿಸುತ್ತಿದ್ದ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ ಬೆನ್ನಲ್ಲೇ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪ್ರಶಾಂತ್ ಯಾದವ್ ಮತ್ತು ಮೋಹನ್ ಕಥೇರಿಯಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಬಿಜೆಪಿಗೆ ಮತ ಹಾಕಲು ಬಯಸಿದ್ದರಿಂದ ಆಕೆಯನ್ನು ಕೊಂದಿದ್ದಾರೆ ಎಂದು ಮಹಿಳೆಯ ಪೋಷಕರು ಹೇಳಿದ್ದಾರೆ ಎಂದು ಮೈನ್ಪುರಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿನೋದ್ ಕುಮಾರ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಪ್ರಶಾಂತ್ ಯಾದವ್ ತಮ್ಮ ಮನೆಗೆ ಬಂದು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ ಎಂದು ಕೇಳಿದ್ದರು ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ತಮ್ಮ ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಸಿಕ್ಕಿರುವುದರಿಂದ ಬಿಜೆಪಿಯ ಚಿಹ್ನೆ — ಕಮಲಕ್ಕೆ ಮತ ಹಾಕುವುದಾಗಿ ಉತ್ತರಿಸಿದರು. ನಂತರ ಯಾದವ್ ಆಕೆಗೆ ಬೆದರಿಕೆ ಹಾಕಿದರು ಮತ್ತು ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯಾದ ‘ಸೈಕಲ್’ ಗೆ ಮತ ಹಾಕುವಂತೆ ಕೇಳಿದರು ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ.
ಮಹಿಳೆಯ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಮೈನ್ಪುರಿ ಜಿಲ್ಲೆಯ ಕರ್ಹಾಲ್ನಲ್ಲಿ ಸಮಾಜವಾದಿ ಪಕ್ಷದ ಪ್ರಶಾಂತ್ ಯಾದವ್ ಮತ್ತು ಅವರ ಸಹಾಯಕರು ದಲಿತ ಮಗಳನ್ನು ‘ಸೈಕಲ್’ಗೆ ಮತ ಹಾಕಲು ನಿರಾಕರಿಸಿದ ಕಾರಣಕ್ಕೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಸಿಂಗ್ ಚೌಧರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆ ಸಂಬಂಧ ಸಮಗ್ರ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಮಾಜವಾದಿ ಪಕ್ಷದ ಕರ್ಹಾಲ್ ಅಭ್ಯರ್ಥಿ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಪಿಟಿಐಗೆ ಹೇಳಿದ್ದು “ಇದು ಬಿಜೆಪಿಯಿಂದ ಸಮಾಜವಾದಿ ಪಕ್ಷದ ಮಾನಹಾನಿ ಮಾಡುವ ಸಂಚು, ಆಗಾಗ್ಗೆ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತದೆ. ಇದಕ್ಕೂ ಎಸ್ಪಿಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.