ಬೆಂಗಳೂರು: ಇನ್ನೇನು ಬಿಜೆಪಿ ಯಲ್ಲಿ ಕದನ ಘೋಷಣೆ ಆದಂತಿದೆ. ಇಲ್ಲಿಯವರೆಗೆ ಗುಂಪುಗಾರಿಕೆ ಇದ್ದರೂ ಬೀದಿಗೆ ಬಂದಿರಲಿಲ್ಲ. ಕೇವಲ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿತ್ತು. ಯತ್ನಾಳ್ ಒಬ್ಬರೇ ಎಡೆಯೂರಪ್ಪ ಮತ್ತು ಅವರ ಪುತ್ರ ಹಾಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಮೇಲೆ ಹರಿಹಾಯುತ್ತಿದ್ದರು. ಈ ಹಿಂದೆ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಅನುಭವ ಹೊಂದಿರುವ ಯತ್ನಾಳ್ ಮೊದಲಿನಿಂದಲೂ ಯಡಿಯೂರಪ್ಪ ಮೇಲೆ ಯುದ್ಧ ಸಾರುತ್ತಾ ಬಂದಿದ್ದಾರೆ. ಯಾವಾಗ ವಿಜಯೇಂದ್ರ ಪಕ್ಷದ ಅಧ್ಯಕ್ಷ ಪದವಿ ಅಲಂಕಾರ ಮಾಡಿದರೋ ಆ ಯುದ್ಧ ತಾರ್ಕಿಕ ಅಂತ್ಯಕ್ಕೆ ಹೋಯಿತು.
ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಒಮ್ಮೆಯೂ ಯತ್ನಾಳ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ. ಅಷ್ಟೇ ಯಾಕೆ ಎಡೆಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಜಗದೀಶ್ ಶೆಟ್ಟರ್ ಸದಾನಂದ ಗೌಡ ಅವರ ಸಂಪುಟದಲ್ಲಿಯೂ ಕೂಡಾ ಯತ್ನಾಳ್ ಅವರಿಗೆ ಸ್ಥಾನ ಸಿಗದಂತೆ ನೋಡಿಕೊಂಡರು ಯಡಿಯೂರಪ್ಪ.
ಜೊತೆಗೆ ಪಕ್ಷದಲ್ಲಿಯೂ ಕೂಡಾ ರಾಜ್ಯ ಮಟ್ಟದಲ್ಲಿ ಆಗಲಿ ರಾಷ್ಟ್ರ ಮಟ್ಟದಲ್ಲಿ ಆಗಲಿ ಅಂತ ಮಹತ್ವದ ಸ್ಥಾನ ಸಿಕ್ಕಿರಲಿಲ್ಲ ಯತ್ನಾಳ್ಗೆ. ಹೀಗಾಗಿ ಯತ್ನಾಳ್ ಒಳಗೊಳಗೇ ಕುದಿಯುತ್ತಾ ಇದ್ದರು. ಅಷ್ಟೇ ಅಲ್ಲದೇ ಹಾದಿ ಬೀದಿಗಳಲ್ಲಿ ಯಡಿಯೂರಪ್ಪ ನಾಯಕತ್ವ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದು ಜಗಜ್ಜಾಹಿರು. ಯಾವಾಗ ವಿಜಯೇಂದ್ರ ರಾಜ್ಯ ಅಧ್ಯಕ್ಷರಾಗಿ ತಮ್ಮ ಪಡೆಯನ್ನು ಕಟ್ಟಿಕೊಂಡರೋ ಆಗ ಯತ್ನಾಳ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ತಮ್ಮ ವರಸೆ ಪ್ರದರ್ಶನ ಮಾಡುತ್ತಾ ಬಂದರು.
ಅಷ್ಟೊಂದು ದಿನಗಳು ಒಂಟಿ ಸಲಗದ ರೀತಿಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ದ ಹೋರಾಟ ಮಾಡುತ್ತಿದ್ದ ಯತ್ನಾಳ್ ಗೆ ಹರಿಹರ ಶಾಸಕ ಹರೀಶ್ ಸೊರಬ ಮಾಜಿ ಶಾಸಕ ಕುಮಾರ ಬಂಗಾರಪ್ಪಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಬೆಳಗಾವಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ದಾವಣಗೆರೆ ಮಾಜಿ ಸಂಸದ ಸಿದ್ದೇಶ್ವರ್ ಮಾಜಿ ಶಾಸಕ ಅರವಿಂದ ಲಿಂಬಾವಳಿ ಹೀಗೆ ಗುಂಪು ದೊಡ್ಡದಾಗುತ್ತಾ ಹೋಯಿತು.
ಸಾಲ ಶತ್ರು ರೋಗ ಬೆಳೆಯಲು ಬಿಡಬಾರದು ಎನ್ನುತ್ತಾನೆ ಚಾಣುಕ್ಯ. ಬಿಟ್ಟರೇ ಬಿಟ್ಟುಕೊಂಡವರು ತೊಂದರೆ ಎದುರಿಸುವುದು ಅನಿವಾರ್ಯ ಆಗುತ್ತದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಯತ್ನಾಳ್ಗೆ ಪಕ್ಷದ ಹೈ ಕಮಾಂಡ್ ನಿಂದ ನೋಟೀಸ್ ಕೊಡಲಾಗಿದೆ.ಇನ್ಮೇಲೆ ಯತ್ನಾಳ್ ಮತ್ತು ಅವರ ತಂಡದ ನಡೆ ಏನು ಎನ್ನುವುದು ಗೊತ್ತಾಗಲಿದೆ. ಯತ್ನಾಳ್ ಏನೋ ಬರಿ ನೋಟೀಸ್ ಅಲ್ಲ ಪಕ್ಷದಿಂದ ಉಚ್ಚಾಟನೆ ಮಾಡಿದರೂ ಹೆದರುವ ಮಗ ಅಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬರೀ ನೋಟೀಸ್ ಅಷ್ಟೇ ಆದರೆ ಪರವಾಗಿಲ್ಲ ಇನ್ಮೇಲೆ ಯತ್ನಾಳ್ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಂಡರೆ ಆಗ ಪಕ್ಷದ ಒಳಗೆ ಏನೆಲ್ಲಾ ಬೆಳವಣಿಗೆಗಳು ಆಗಬಹುದು ಎನ್ನುವುದು ಕುತೂಹಲ ಸಂಗತಿ.
ಜೊತೆಗೆ ಯತ್ನಾಳ್ ಉತ್ತರ ಕರ್ನಾಟಕದ ಬಲಿಷ್ಠ ಪಂಚಮಸಾಲಿ ವರ್ಗಕ್ಕೆ ಸೇರಿದವರು. ಪಕ್ಷ ಏನಾದರೂ ಶಿಸ್ತು ಕ್ರಮ ಕೈಗೊಂಡರೂ ಅರಗಿಸಿಕೊಳ್ಳುವ ತಾಕತ್ತು ಅವರಿಗಿದೆ.ಯಾಕೆಂದರೆ ಈ ಹಿಂದೆ ಯತ್ನಾಳ್ ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಹಾಗೇನಾದ್ರೂ ಆದಲ್ಲಿ ಹೇಗೋ ಉತ್ತರ ಕರ್ನಾಟಕ ಭಾಗದಲ್ಲಿ ಜೆ. ಡಿ. ಎಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಆಗ ಕುಮಾರಸ್ವಾಮಿ ಯತ್ನಾಳ್ ಗೆ ಹಸಿರುಗಂಬಳಿ ಹಾಸಿ ಪಕ್ಷದ ರಾಜ್ಯ ಅಧ್ಯಕ್ಷ ಪಟ್ಟ ಕಟ್ಟಿದರೆ ಆಶ್ಚರ್ಯ ಪಡಬೇಕಿಲ್ಲ.ಯಾಕೆಂದರೆ ಯತ್ನಾಳ್ ಈಗ ಒಬ್ಬಂಟಿ ಅಲ್ಲ.