ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲಿಂದ ಮೇಲೆ ನಿರೂಪಣೆ ಆಗುತ್ತಲೇ ಇದೆ. ಇದನ್ನೆಲ್ಲ ಸರಿಪಡಿಸುವ ಉದ್ದೇಶದಿಂದ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಾಜಿತ ಅಭ್ಯರ್ಥಿಗಳ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ಲಂಚ್ ಮೀಟಿಂಗ್ ಆಯೋಜನೆ ಮಾಡಿದ್ದಾರೆ.ಬೆಂಗಳೂರಿನ ರಾಜಭವನದ ಸನೀಹದಲ್ಲಿರುವ ಖಾಸಗಿ ಹೊಟೇಲ್ನಲ್ಲಿ ಸಂಘಟನಾತ್ಮಕ ದೃಷ್ಟಿಯಿಂದ ಎಲ್ಲಾ ಬಿಜೆಪಿಯ ಪರಾಜಿತ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ, ಮಾತುಕತೆ ಮಾಡಿ ಮುಂದಿನ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣಕ್ಕೆ ವಿಜಯೇಂದ್ರ ಈ ಹೆಜ್ಜೆ ಇಟ್ಟಿದ್ದಾರೆ.
ಮುಂದೆ 2028 ರ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪರಾಭವಗೊಂಡಿರುವ ಕ್ಷೇತ್ರದಲ್ಲಿ ಸಂಘಟನೆ ಹಾಗೂ ಸದ್ಯದಲ್ಲೇ ಘೋಷಣೆಯಾಗಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗೆ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಮ್ಮ ಸ್ಥಾನಕ್ಕೂ ಕುತ್ತು ಬಾರದ ರೀತಿಯಲ್ಲಿ ನಿರ್ವಹಣೆ ಮಾಡಲು ವಿಜಯೇಂದ್ರ ಮಾಸ್ಟರ್ಪ್ಲಾನ್ ರೂಪಿಸಿದ್ದಾರೆ.
ಒಂದು ಕಡೆ ಯತ್ನಾಳ್ ಬಣ, ದೆಹಲಿಯಲ್ಲಿ ಬೀಡುಬಿಟ್ಟಿದ್ದು ಅಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದರೆ ಇಲ್ಲಿ ಎಲ್ಲಾ ಪರಾಜಿತ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ವಿಜಯೇಂದ್ರ ಬಂಡಾಯವೆದ್ದಿರುವ ಟೀಂಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ.ಇಂದುಬೆಳಗ್ಗೆ 11 ಗಂಟೆ ವೇಳೆಗೆ ಪರಾಜಿತ ಅಭ್ಯರ್ಥಿಗಳೊಂದಿಗೆ ಖಾಸಗಿ ಹೋಟೆಲ್ನಲ್ಲಿ ಸಮಾಲೋಚನೆ ನಡೆಸಲಿರುವ ವಿಜಯೇಂದ್ರ ಅವರ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲಿದ್ದು, ಮಧ್ಯಾಹ್ನ 1.30ನಂತರ ಲಂಚ್ ಆಯೋಜನೆ ಮಾಡಿದ್ದಾರೆ.