ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ಬೇಕಾದ್ರೆ ಕೋರ್ಟ್ಗೆ ಹೋಗಲಿ. ಈ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ಸಿಬಿಐಗೆ ಕೊಡುವ ವಿಚಾರದಲ್ಲಿ ಈಗಾಗಲೇ ಕೋರ್ಟ್ ಆದೇಶ ನೀಡಿದೆ. ಬಿಜೆಪಿಯವರು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತದೆ.
ಇಲ್ಲದಿದ್ದರೆ ಸರಿ ಇರೋದಿಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.ಬಿಜೆಪಿಯವರು ಬೇಕಾದರೆ ಕೋರ್ಟ್ ಗೆ ಹೋಗಲಿ/ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಅವರದೇ ಆದ ತನಿಖೆ ನಡೆಯುತ್ತದೆ. ಸರ್ಕಾರದ ಅಡಿಯಲ್ಲಿ ಲೋಕಾಯುಕ್ತ ಕೆಲಸ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬೆಂಗಳೂರಿಗೆ ವಾಪಸ್ ಆಗಿದ್ದು, ದೆಹಲಿ ಪ್ರವಾಸದ ವೇಳೆ ತಾವು ಯಾವುದೇ ರಾಜಕೀಯ ವಿಷಯದ ಬಗ್ಗೆ ಯಾರೊಂದಿಗೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ನೂತನ ಕಚೇರಿ ಕಟ್ಟಡದ ಉದ್ಘಾಟನೆ ವೇಳೆ ತಾವು ಹೋಗಿರಲಿಲ್ಲ. ಇದೀಗ ಹೋಗಿ ನೋಡಿ ಬರುವ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಕೇವಲ 15ನಿಮಿಷಗಳ ಕಾಲ ಅನೌಪಚಾರಿಕವಾಗಿ ಮಾತನಾಡಿದ್ದೇನೆ. ಡಿಕೆ ಮತ್ತು ಸಿಎಂ ಅವರ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿಲ್ಲ. ಶೋಷಿತ ವರ್ಗಗಳ ಸಮಾವೇಶ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಡಿಕೆಯಾಗಲೀ, ಕೆ.ಎನ್. ರಾಜಣ್ಣ ಅವರ ಬಗ್ಗೆ ಏನೂ ಕೇಳಬೇಡಿ ಎಂದು ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಮನವಿ ಮಾಡಿದ್ದಾರೆ.