ಬೆಂಗಳೂರು: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಂದ ಹಿಡಿದು ಎಲ್ಲಾ ನಾಯಕರು ಆರಾಮವಾಗಿ ಇದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ.
ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರೆಲ್ಲಾ ತುಂಬಾ ಆರಾಮಾಗಿದ್ದಾರೆ. ಬಿಜೆಪಿ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಬಿಡುವಾಗಿದ್ದಾರೆ. ಮುಂದಿನ ಐದು ವರ್ಷ ಕೂಡ ಅವರು ಬಿಡುವಾಗಿ ಇರುತ್ತಾರೆ. ವಿಪಕ್ಷದಲ್ಲೇ ಕೂರುತ್ತಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ವಕ್ಫ್ ವಿಚಾರವಾಗಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ನೋಟಿಸ್ ಕೊಡಲು ಕಾರಣ ಯಾರು ಅಂದರೆ ಅದು ಬಿಜೆಪಿ ಅವರೇ. ಮಗು ಚಿವುಟೋದು ಅವರೇ, ತೊಟ್ಟಿಲು ತೂಗೋದು ಅವರೇ. ಅವರಿಂದಲೇ ನೋಟಿಸ್ ಕೊಟ್ಟಿದ್ದು ಅಲ್ವಾ. ಅದನ್ನು ಈಗ ನಾವು ನಿಲ್ಲಿಸುತ್ತಿದ್ದೇವೆ. ನಾವು ರೈತರ ಪರವಾಗಿ ಇದ್ದೇವೆ ಎಂದು ಕಿಡಿಕಾರಿದ್ದಾರೆ.