ಬೆಂಗಳೂರು: ಜಾತಿನಿಂದನೆ ಹಾಗೂ ಲೈಂಗಿಕ ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚಿಗೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವ ಘಟನೆ ನಂದಿನಿ ಲೇಔಟ್ ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಲಕ್ಷ್ಮಿದೇವಿನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆಯಲಾಗಿದೆ. ಬಳಿಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟೇಡಿಯಂ ಬಳಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಬೆಂಬಲಿಗರು ಕೂಡಾ ಪ್ರತಿಭಟನೆ ನಡೆಸಿದ್ದು, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಕಾರು ಜಖಂಗೊಳಿಸಿರುವ ಆರೋಪವೂ ಕೇಳಿಬಂದಿದೆ. ಪ್ರತಿಭಟನೆ ವೇಳೆಯಲ್ಲಿ 2-3 ಕಾರುಗಳ ಜಖಂಗೊಂಡಿದ್ದು, ಕೆಲ ಮಂದಿಗೆ ಹಲ್ಲೆಯಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ನಂದಿನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಹಾಗೂ ಹನುಮಂತರಾಯಪ್ಪ ಕಾರಣ ಎಂದು ಆರೋಪಿಸಿರುವ ಮುನಿರತ್ನ, ನನ್ನನ್ನು ಕೊಲೆ ಮಾಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸುರೇಶ್ ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಮಧ್ಯೆ ಘಟನೆಯನ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮುನಿರತ್ನ ಮೇಲೆ ಹಲ್ಲೆಯಾಗಿದೆ. ಗುಂಡಾಗಳ ಮೂಲಕ ಹಲ್ಲೆ ನಡೆಸಲಾಗಿದೆ. ಗುಂಡಾ ರಾಜ್ಯವಾಗಲು ಬಿಡಲು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಘಟನೆಯನ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮುನಿರತ್ನ ಮೇಲೆ ಹಲ್ಲೆಯಾಗಿದೆ. ಗುಂಡಾಗಳ ಮೂಲಕ ಹಲ್ಲೆ ನಡೆಸಲಾಗಿದೆ. ಗುಂಡಾ ರಾಜ್ಯವಾಗಲು ಬಿಡಲು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.