ನವದೆಹಲಿ: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಶುಕ್ರವಾರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೆಂಪು ಬಣ್ಣದಲ್ಲಿ ‘1984’ ಎಂದು ಬರೆದ ಬ್ಯಾಗ್ ವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.
ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಇತ್ತೀಚಿಗೆ ಲೋಕಸಭಾ ಕಲಾಪದ ವೇಳೆ ಪ್ಯಾಲೇಸ್ತಿನ್ ಮತ್ತು ಬಾಂಗ್ಲಾದೇಶ ಉಲ್ಲೇಖಿಸುವ ಬ್ಯಾಗ್ ಹಿಡಿದು ಬಂದಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಪಾಕಿಸ್ತಾನದ ರಾಜಕಾರಣಿಯೊಬ್ಬರು ಶ್ಲಾಘಿಸಿದರೆ, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಈ ವಿಚಾರ ಸುದ್ದಿಯಲ್ಲಿರುವಾಗಲೇ ಈಗ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಅವರು ಪ್ರಿಯಾಂಕಾ ಗಾಂಧಿಯವರಿಗೆ ಬ್ಯಾಗೊಂದನ್ನು ಗಿಫ್ಟ್ ನೀಡಿದ್ದಾರೆ.
ಭುವನೇಶ್ವರ್ ಸಂಸದೆಯಾಗಿರುವ ಸಾರಂಗಿ, ಪಾರ್ಲಿಮೆಂಟ್ ಕಾರಿಡಾರ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಬ್ಯಾಗ್ ನೀಡಿದ್ದಾರೆ. ಸಾರಂಗಿಯಿಂದ ಬ್ಯಾಗ್ ಪಡೆದ ಪ್ರಿಯಾಂಕಾ ಗಾಂಧಿ, ಅದರ ಮೇಲೆ ಏನು ಬರೆಯಲಾಗಿದೆ ಎಂಬುದನ್ನು ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ ಎನ್ನಲಾಗಿದೆ.