ರಾಮನಗರ: ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಅವರು ಜ.7ರ ಮಂಗಳವಾರ ಬಿಡದಿಯ ವೇಸ್ಟ್ ಟು ಎನರ್ಜಿ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಬಿಡದಿಯ ವೇಸ್ಟ್ ಟು ಎನರ್ಜಿ ಘಟಕ ತಿಂಗಳ ಹಿಂದೆ ಪೂರ್ಣಗೊಂಡಿತ್ತು, ಅದನ್ನು ಸ್ವಾಧೀನಪಡಿಸಿ ಕೊಂಡಿರಲಿಲ್ಲ, ಅದನ್ನ ನೀವೆ ನಡೆಸಿ ಅದರ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಘಟಕದವರಿಗೆ ಹೇಳಿದ್ದೆವು, ಅಷ್ಟರಲ್ಲಿ ದುರಾದೃಷ್ಟದಿಂದ ಈ ರೀತಿಯ ಅನಾಹುತ ಸಂಭವಿಸಿದೆ. ಕಾರ್ಮಿಕರಿಗೆ ಸುಟ್ಟಗಾಯಗಳಾಗಿವೆ. ಅವಘಡದ ವಿಚಾರಣೆಗಾಗಿ ಸಮಿತಿಯೊಂದನ್ನು ರಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉಷ್ಣವಿದ್ಯುತ್ ಸ್ಥಾವರದ ಬಾಯ್ಲರ್ ಅನ್ನು ತಾಂತ್ರಿಕ ಪರಿಣತರಿಲ್ಲದೇ ತೆರೆದ ಕಾರಣ ಬೆಂಕಿ ಹಾಗೂ ಬಿಸಿಬೂದಿ ಅಲ್ಲಿದ್ದ ಕಾರ್ಮಿಕರ ಮೇಲೆ ಏಕಾಏಕಿ ಚಿಮ್ಮಿದೆ ಇದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ ಎಂದರು.ಇದರಿಂದ ಗಾಯಗೊಂಡಿರುವ ಕಾರ್ಮಿಕರಿಗೆ ಹೆಚ್ಚಿನ ಚಿಕಿತ್ಸೆ ನೀಡುವಂತೆ ಈಗಾಗಲೇ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಚಿಕಿತ್ಸೆಗೆ ಸರ್ಕಾರದಿಂದ ಹಣ ಪಾವತಿಸಲಾಗುವುದು. ಪರಿಹಾರ ವಿತರಣೆಗೆ ಹಾಗೂ ಮುಂದೆ ಇಂತಹ ಅನಾಹುತಗಳು ಆಗದಂತೆ ಘಟಕದ ನಿರ್ದೇಶಕರ ಬಳಿ ಚರ್ಚಿಸಲಾಗುವುದು ಎಂದರು.
ಇಲ್ಲಿ ಸ್ಥಾಪಿಸಿರುವ ವೇಸ್ಟ್ ಟು ಎನರ್ಜಿ ಘಟಕದಿಂದ ವಾಸನೆ ಬರುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಈ ಘಟಕದಿಂದ ವಾಸನೆ ಬರುವುದಿಲ್ಲ ಕಸ ತರುವ ಲಾರಿಯಿಂದ ವಾಸನೆ ಬರುತ್ತಿದೆ. ಆದ್ದರಿಂದ ತ್ಯಾಜ್ಯವನ್ನು ಹೊತ್ತು ತರುವ ಲಾರಿಗಳು ತ್ಯಾಜ್ಯವನ್ನು ಮುಚ್ಚಿ ತರಬೇಕು ಎಂದು ತಿಳಿಸಲಾಗಿದೆ ಹಾಗೂ ಕಸ ಸುರಿದು ಹೋಗುವ ಖಾಲಿ ಲಾರಿಯನ್ನು ತಕ್ಷಣ ಅಲ್ಲೇ ಸ್ವಚ್ಛ ಮಾಡಲು ತಿಳಿಸಲಾಗುವುದು. ಇದರಿಂದ ಯಾವುದೇ ವಾಸನೆ ಬರುವುದಿಲ್ಲ ಎಂದು ತಿಳಿಸಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಘಟಕದ ಮುಖ್ಯ ಎಂಜಿನಿಯರ್ ಸೂರ್ಯಕಾಂತ್, ಘಟಕದ ಸುಪರಿಟೆಂಡೆಂಟ್ ಎಂಜಿನಿಯರ್ ಅನಿತಾ ಸೇರಿದಂತೆ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಹಲವರಿದ್ದರು.