ಬೊಮ್ಮನಹಳ್ಳಿ: ಹೆಚ್ಎಸ್ಆರ್ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ನೀಡುವ ಸರ್ಕಾರದ ಆದೇಶ ವಾಪಸ್ ಪಡೆಯುವಂತೆ ಶಾಸಕ ಸತೀಶ್ ರೆಡ್ಡಿ ಸರ್ಕಾರವನ್ನು ಆಗ್ರಹಿಸಿದರು.ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿಯು ಜಯಕರ್ನಾಟಕ ಸಂಘಟನೆಯ ಮುಖಂಡರಾದ ನಾಗೇಶ್ ನೇತೃತ್ವದಲ್ಲಿ, ಹೆಚ್ಎಸ್ಆರ್ ಬಡಾವಣೆಯ ಬಿಡಿಎಕಾಂಪ್ಲೆಕ್ಸ್ನಲ್ಲಿ ನಡೆದ ನಾಗರಿಕ ಪ್ರತಿರೋಧಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಹತ್ತು ವರ್ಷಗಳಿಂದಲೂ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣದ ಯತ್ನ ನಡೆದಿದೆ. ಹಿಂದಿನ ಯಾವ ಸರ್ಕಾರಗಳೂ ಇದಕ್ಕೆ ಆಸ್ಪದ ನೀಡಿ ರಲಿಲ್ಲ, ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಇದಕ್ಕೆ ಮುಂದಾಗಿದೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗಾಗಿ ಪ್ರಶ್ನೆ ಕಳುಹಿಸಿದ್ದರೂ, ಬೇಕಂತಲೇ ಚರ್ಚೆಗೆ ತೆಗೆದುಕೊಳ್ಳಲಿಲ್ಲ ಮತ್ತು ಉತ್ತರವನ್ನೂ ನೀಡಿಲ್ಲ ಎಂದು ಸತೀಶ್ ರೆಡ್ಡಿ ಆರೋಪಿಸಿದರು.
ಬಿಡಿಎ ಕಾಂಪ್ಲೆಕ್ಸ್ ಗಳ ಖಾಸಗೀಕರಣ ಪ್ರಕ್ರಿಯೆ ಹಿಂದೆ ಸರ್ಕಾರದ ಮಂತ್ರಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಂ-ಫಾರ್ ಕಂಪನಿಯಲ್ಲಿ ಕೆಲ ಮಂತ್ರಿಗಳ ಪಾಲಿದೆ. ಅದರ ಸಲುವಾಗಿಯೇ ಶೈತಾಗಾರದಲ್ಲಿದ್ದ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿದ್ದಾರೆ, ಯಾವ ಕಾರಣಕ್ಕೂ ಈ ಕಾಂಪ್ಲೆಕ್ಸ್ ಖಾಸಗೀಕರಣಕ್ಕೆ ಬಿಡುವುದಿಲ್ಲ, ಇದಕ್ಕಾಗಿ ನಾವು ಜೈಲಿಗೂ ಹೋಗಲು ಸಿದ್ಧ ಎಂದರು.
ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆಯ ಮುಖಂಡರಾದ ನಾಗೇಶ್ ಮಾತನಾಡಿ ಬಿಡಿಎ ಕಾಂಪ್ಲೆಕ್ಸ್ ಕೇವಲ ವ್ಯಾಪಾರದ ಕೇಂದ್ರವಲ್ಲ, ಇಲ್ಲಿನ ನಿವಾಸಿಗಳು ಈ ಕಾಂಪ್ಲೆಕ್ಸ್ ಜತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ, ಇದು ನಮ್ಮದು ಎಂಬ ಭಾವನೆ ಇದೆ. ಹೀಗಿರುವಾಗ ಇದನ್ನು ಖಾಸಗೀಕರಿಸುವುದು ಸರಿಯಲ್ಲ ಎಂದರು.
ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್ ಎಂ ಎನ್ ರಮೇಶ್ ಮಾತನಾಡಿ ಸುಮಾರು ಎರಡು ಸಾವಿರ ಕೋಟಿ ಬೆಲೆ ಬಾಳುವ ಆಸ್ತಿಯನ್ನು ಈ ಭಾಗದ ರೈತರು ಬಿಡಿಎ ಗೆ ವಸತಿ ಉದ್ದೇಶಕ್ಕೆ ನೀಡಿದ್ದಾರೆ. ರೈತರು ಕೊಟ್ಟ ಆಸ್ತಿಯನ್ನು ಖಾಸಗಿ ಕಂಪನಿಗೆ ಕೊಡುವುದು ರೈತರಿಗೆ ಮಾಡುವ ದೊಡ್ಡ ದ್ರೋಹ ಎಂದರು.
ಹೆಚ್ಎಸ್ಆರ್ ನಿವಾಸಿಗಳ ಸಂಘದ ಮುಖ್ಯಸ್ಥೆ ಡಾ.ಶಾಂತ ಮಾತನಾಡಿ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ನಿರ್ಮಿಸಲಾದ ಈ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ನೀಡುವುದು ಸರಿಯಲ್ಲ, ಕಾಂಪ್ಲೆಕ್ಸ್ಒಡೆಯುವುದರಿಂದ ಮತ್ತು ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದ್ದು, ಪರಿಸರವೂ ಹಾಳಾಗುತ್ತದೆ ಎಂದರು.
ಬಿಜೆಪಿ ಮುಖಂಡರಾದ ಮುರಳೀಧರ್, ಸಯ್ಯದ್ ಸಲಾಂ, ನಿವಾಸಿಗಳ ಸಂಘದ ಅಧ್ಯಕ್ಷ ಬಿ.ಎನ್.ಎಸ್.ರೆಡ್ಡಿ, ಹೋರಾಟ ಸಮಿತಿ ಮುಖಂಡ ನಾಗೇಶ್, ದಲಿತ ಮುಖಂಡ ಚಂದ್ರಪ್ಪ, ಕೋರಮಂಗಲ ಧನಪಾಲ್ ಇದ್ದರು.ಇದೇ ಸಂದರ್ಭದಲ್ಲಿ ಬಿಡಿಎ ಕಾಂಪ್ಲೆಕ್ಸ್ಉಳಿಸಿ ಹೋರಾಟ ಸಮಿತಿ ಸದಸ್ಯರು ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ನಾಗೇಶ್ ನೇತೃತ್ವದಲ್ಲಿ ಹಾಗೂ ಹೆಚ್ಎಸ್ಆರ್ ಬಡಾವಣೆ ನಿವಾಸಿಗಳು ಶಾಸಕ ಸತೀಶ್ ರೆಡ್ಡಿಯವರಿಗೆ ಮನವಿ ಪತ್ರ ನೀಡಿದರು.