ಬೆಂಗಳೂರು: ರಾಜ್ಯ ಸರ್ಕಾರ ಇ-ಖಾತಾ ಸೇವೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕಿತ್ತು. ಹೊಸ ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಸರ್ಕಾರ ಆದ್ಯತೆ ನೀಡಬೇಕಿತ್ತು ಎಂದು ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ನ ಅಧ್ಯಕ್ಷ ಅಮರ್ ಮೈಸೂರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಖಾತಾ ಸೇವೆಯನ್ನು ಪರಿಚಯಿಸಿದ ನಂತರ ಸುಮಾರು 7,500 ಆಸ್ತಿಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದು ಸುಮಾರು 7,500 ಕೋಟಿ ರೂಪಾಯಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಸರ್ಕಾರವು ಸೇವೆಯನ್ನು ಪ್ರಾರಂಭಿಸಿದ ನಂತರ, ಆಸ್ತಿಗಳ ನೋಂದಣಿಗೆ ತೊಂದರೆಯಾಯಿತು. ರಿಯಲ್ ಎಸ್ಟೇಟ್ ಮಾರುಕಟ್ಟೆಯು ನವೆಂಬರ್ನಲ್ಲಿ ಚೇತರಿಸಿಕೊಳ್ಳಲು ಪ್ರಾರಂಭಿಸಿತು. ಡಿಸೆಂಬರ್ ಮಧ್ಯದವರೆಗೆ ಶೇಕಡಾ 60ರಷ್ಟು ಚೇತರಿಕೆ ಕಂಡಿದೆ ಎಂದರು.
ಇ-ಖಾತಾ ಖರೀದಿದಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಯಾವುದೇ ಮೋಸದ ವಹಿವಾಟುಗಳಿಗೆ ಅವಕಾಶವಿರುವುದಿಲ್ಲ. ಪಂಚಾಯತ್ಗಳು ಮತ್ತು ಬಿಎಂಆರ್ ಡಿಎ ಇ-ಖಾತಾ ಸೇವೆಯನ್ನು ಬಿಬಿಎಂಪಿ ಪರಿಚಯಿಸುವ ಮೊದಲೇ ಜಾರಿಗೆ ತಂದಿತ್ತು. ಬೆಂಗಳೂರಿನಲ್ಲಿ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಸರ್ಕಾರವು ಹೊಸ ಖರೀದಿದಾರರು ಮತ್ತು ಮಾರಾಟಗಾರರಿಗೆ ಆದ್ಯತೆ ನೀಡಬೇಕು ಮತ್ತು ನಂತರ ತಮ್ಮ ದಾಖಲೆಗಳನ್ನು ನವೀಕರಿಸಲು ಬಯಸುವವರಿಗೆ ಆದ್ಯತೆ ನೀಡಬೇಕು. ಇದು ಮುದ್ರಾಂಕ ಶುಲ್ಕ ಸಂಗ್ರಹದ ಮೇಲೂ ಪರಿಣಾಮ ಬೀರಿದೆ.
ಬಿಲ್ಡರ್ಗಳು ಮತ್ತು ಖರೀದಿದಾರರು ತಮ್ಮ ನಡುವಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವವರೆಗೆ ಇ-ಖಾತಾಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಸಮಯ ನೀಡಬೇಕು. ಆಧಾರ್ ಕಾರ್ಡ್ ವಿವರಗಳನ್ನು ಒಳಗೊಂಡಂತೆ ದಾಖಲೆಗಳ ಅಪ್ಲೋಡ್ ಮತ್ತು ದಾಖಲೆಗಳ ಹೊಂದಾಣಿಕೆಯನ್ನು ಉಲ್ಲೇಖಿಸಿದ ಅವರು, ಇ-ಖಾತಾ ನೀಡಲು ಬಿಬಿಎಂಪಿ ಅಳವಡಿಸಿಕೊಂಡಿರುವ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ ಮತ್ತು ತೊಡಕಿನದ್ದಾಗಿದೆ. ಇದು ನೋಂದಣಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಎಂದು ಹೇಳಿದರು.
ಆಸ್ತಿಗಳ ಜಂಟಿ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದಗಳ ಮೇಲಿನ ಸ್ಟಾಂಪ್ ಮತ್ತು ನೋಂದಣಿ ಶುಲ್ಕಗಳನ್ನು ಪರಿಷ್ಕರಿಸುವ ಕುರಿತು ಕ್ರೆಡೈ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅಮರ್ ಹೇಳಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಮತ್ತು ಇನ್ಸ್ಪೆಕ್ಟರ್ ಜನರಲ್, ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ ಕೆಎ ಅವರೊಂದಿಗೆ ಇ-ಖಾತಾ ಮತ್ತು 2016 ರ ಲೆಕ್ಕಾಚಾರದ ವಿಧಾನವನ್ನು ಪರಿಷ್ಕರಿಸಲು ಸಭೆ ನಡೆಸಲಾಗಿದೆ. ಟೈಟಲ್ ಡೀಡ್ ಠೇವಣಿ ಒಪ್ಪಂದಗಳು ಮತ್ತು ಅಡಮಾನ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಹಿಂದಿನ 10 ಲಕ್ಷ ರೂಪಾಯಿಗಳಿಗೆ ಹಿಂತಿರುಗಿಸಲು ಕ್ರೆಡೈ ಸದಸ್ಯರು ಮನವಿ ಮಾಡಿದರು.
ಆಯಾ ವಲಯ ವ್ಯಾಪ್ತಿಯಲ್ಲಿ ಬಂದಿರುವ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಬಂದಿರುವ 46,962 ಅರ್ಜಿಗಳ ಪೈಕಿ 39,784 ಅರ್ಜಿಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಅಂತಿಮ ಇ–ಖಾತಾ ನೀಡಲಾಗಿದೆ ಎಂದರು. ಕಳೆದ 24 ಗಂಟೆಗಳಲ್ಲಿ 2,311 ಇ-ಖಾತಾಗಳನ್ನು ನೀಡಲಾಗಿದೆ. ಬಂದಿರುವ ಒಟ್ಟು ಅರ್ಜಿಗಳ ಪೈಕಿ ಶೇ.90ರಷ್ಟು ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ ಅವರು, 2-3 ದಿನಗಳಲ್ಲಿ ಎಲ್ಲ ವಲಯಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇ-ಖಾತಾಗಳ ತ್ವರಿತ ವಿಲೇವಾರಿಗಾಗಿ, ಎಲ್ಲಾ ಎಂಟು ಬಿಬಿಎಂಪಿ ವಲಯಗಳಲ್ಲಿ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇ-ಖಾತಾ ಸಂಬಂಧಿತ ದೂರುಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಸಹಾಯವಾಣಿ ಸಂಖ್ಯೆ 9480683695 ನ್ನು ಸಂಪರ್ಕಿಸಲು ನಾಗರಿಕರಿಗೆ ಕರೆ ನೀಡಿದರು.