ಪಾಟ್ನಾ: ರಾಜ್ಯದಲ್ಲಿ ಸಕ್ಕರೆ ಉದ್ಯಮವನ್ನು ಯಶಸ್ವಿಯಾಗಿ ನಡೆಸಿ ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾಗಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಸಕ್ಕರೆ ಉದ್ಯಮ ಇದೀಗ ಬಿಹಾರಕ್ಕೂ ಕಾಲಿಟ್ಟಿದೆ.ಕಳೆದ ವರ್ಷ ಬಿಹಾರದಲ್ಲಿ ರಿಗ್ ಸಕ್ಕರೆ ಕಾರ್ಖಾನೆ ಖರೀದಿಸಿ, ಆ ಕಾರ್ಖಾನೆಯ ಸಾಮಥ್ರ್ಯವನು ಒಂದೇ ವರ್ಷದಲ್ಲಿ ದ್ವಿಗುಣಗೊಳಿಸಿದ್ದ ನಿರಾಣಿಯವರು, ನಾಳೆ ಸಕ್ಕರೆ ಡಿಸ್ಟಲರಿ ಮತ್ತು ವಿದ್ಯುತ್ ಉತ್ಪಾದನೆಯ ಘಟಕಗಳ ವಿಸ್ತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಚಿವ ಸಂಪುಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡುಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ನಷ್ಟದಿಂದಾಗಿ ಬಾಗಿಲು ಮುಚ್ಚಿತ್ತು. ಆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಪುನರಾರಂಭಿಸಿದ್ದರು. ನಿರಾಣಿ ಮಹಾರಾಷ್ಟ್ರದ ಭೀಮಾ ಪಾಟಸ ಸಕ್ಕರೆ ಕಾರ್ಖಾನೆಯೂ ನಷ್ಟದಿಂದಾಗಿ ಬಾಗಿಲು ಮುಚ್ಚಿತ್ತು. ಈ ಕಾರ್ಖಾನೆಯನ್ನು ಇತ್ತೀಚೆಗೆ ಖರೀದಿಸಿ, ಸೂಕ್ತ ವ್ಯವಸ್ಥೆ ಮಾಡಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಯಾದವಾಡ ಗ್ರಾಮದ ರತ್ನ ಸಿಮೆಂಟ್ ಕಾರ್ಖಾನೆ, ಮುಧೋಳ ತಾಲೂಕಿನ ಲೋಕಾಪುರದ ವಾಸು ಪೂಜ್ಯ ಸಿಮೆಂಟ್ ಕಾರ್ಖಾನೆ ಮತ್ತು ಚಿತ್ರದುರ್ಗದ ಸುವರ್ಣ ಸಿಮೆಂಟ್ ಕಾರ್ಖಾನೆಗಳು ಕೂಡ ಆರ್ಥಿಕ ಮುಗ್ಗಟ್ಟಿನಿಂದ ಬಾಗಿಲು ಮುಚ್ಚಿದ್ದವು.
ಇವುಗಳನ್ನು ತಮ್ಮ ಉಸ್ತುವಾರಿಗೆ ಪಡೆದು ಸೂಕ್ತ ವ್ಯವಸ್ಥೆ ಮಾಡಿ ಚೆನ್ನಾಗಿ ಲಾಭದತ್ತ ಕೊಂಡೊಯ್ದಿದ್ದಾರೆ. ಹೀಗೆ ಆಡಳಿತ ವೈಫಲ್ಯ, ಹಣಕಾಸು ಮುಗ್ಗಟ್ಟಿನಿಂದ ಮುಚ್ಚಿದ 8 ಕಾರ್ಖಾನೆಗಳನ್ನು ನಿರಾಣಿ ಅವರು ಖರೀದಿಸಿ ಅವುಗಳಿಗೆ ಪುನಶ್ವೇತನ ನೀಡಿ ಯಶಸ್ವಿಯಾಗಿ ನಡೆಸಿದ್ದಾರೆ. ಅಲ್ಲದೆ, ಮುಂಬರುವ ಮಾರ್ಚ್ 25ರಂದು ದಿನಕ್ಕೆ 35 ಸಾವಿರ ಕ್ವಿಂಟಲ್ ಅಕ್ಕಿ ಮತ್ತು ಗೋವಿನ ಜೋಳ ಬಳಸಿ ಎಥೆನಾಲ್ ಉತ್ಪಾದಿಸುವ ಭವ್ಯ ಘಟಕವೊಂದನ್ನು ಕರ್ನಾಟಕದಲ್ಲಿ ಆರಂಭ ಮಾಡಲಿದ್ದಾರೆ.
ನಿರಾಣಿ ಸ್ಥಾಪಿಸಿರುವ ಉದ್ಯಮಗಳ ಪೈಕಿ ಎಥೆನಾಲ್ ಉತ್ಪಾದನೆಯಲ್ಲಿ ಏಷ್ಯಾದಲ್ಲೇ ಪ್ರಥಮ ಸ್ಥಾನ ಪಡೆದಿದೆ. ದಿನಕ್ಕೆ ಒಟ್ಟು 1 ಲಕ್ಷ ಟನ್ ಕಬ್ಬು ಅರೆದು ಸಕ್ಕರೆ ಉತ್ಪಾದನೆ ಮಾಡುತ್ತಿದ್ದಾರೆ. 75,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿದ್ದು, ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆಗಳ ಆರಂಭ ಮಾಡಿದ್ದಾರೆ. ಸಾಕಷ್ಟು ಅವಲಂಬಿತ ಉದ್ಯೋಗಗಳ ಬೆಳವಣಿಗೆ, ಸಾರ್ವಜನಿಕ ಸೇವಾ ವಲಯದಲ್ಲೂ ಸಾಧನೆ ಮಾಡಿದ್ದಾರೆ.
ನಿರಾಣಿ ಸಮೂಹವು ಉದ್ಯಮ ವಲಯದಲ್ಲಿ ಮಾತ್ರ ಮುಂಚೂಣಿಯಲ್ಲಿಲ್ಲ. ರೈತರ ಅಧ್ಯಯನ ಪ್ರವಾಸ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಕೃಷಿ ಸಂಶೋಧನೆಗಳಿಗೆ ಪ್ರೋತ್ಸಾಹಿಸುವ ಮಹತ್ವದ ಕೆಲಸಗಳನ್ನು ಮಾಡುತ್ತಿದೆ. ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಎಂ.ಆರ್.ಎನ್ ಫೌಂಡೇಶನ್ ಬಹಳ ಹೆಸರು ಗಳಿಸಿದ್ದು, ಜನಮೆಚ್ಚುಗೆ ಪಡೆದಿದೆ. ನಿರಾಣಿ ಅವರ ಅಮೋಘ ಸೇವೆಯನ್ನು ಗುರುತಿಸಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿವಿ ಮತ್ತು ಮಹಾರಾಷ್ಟ್ರದ ಕೃಷ್ಣ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೌರವ ರ ಡಾಕ್ಟರೇಟ್ ನೀಡಿ ಗೌರವಿಸಿವೆ.