ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ಅವರನ್ನು ಇಂದು ನೇಮಕ ಮಾಡಿದ್ದು, ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಕೆರಳಿಸಿದೆ. ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, ಸಂದೀಪ್ ರೆಡ್ಡಿ ನೇಮಕ ಮಾಡುವಾಗ ನನ್ನ ಅಭಿಪ್ರಾಯವನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಿಗಣಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ಖಾಸಗಿ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿದ ಡಾ.ಕೆ. ಸುಧಾಕರ್, ಬಿ.ವೈ.ವಿಜಯೇಂದ್ರರ ನಡೆಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇತ್ತ ರಾಜ್ಯದಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳಾಗಿ ಬಿಜೆಪಿ ವಿಂಗಡನೆ ಮಾಡಿಕೊಂಡಿದೆ. ಇದರ ಪೈಕಿ ಒಂದೊಂದೇ ಜಿಲ್ಲೆಗೆ ಇಂದಿನಿಂದ ಜಿಲ್ಲಾಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರ ಸಂಘಟನಾತ್ಮಕ ಜಿಲ್ಲೆಗೆ ಸಂದೀಪ್ ರೆಡ್ಡಿ ಅವರ ಹೆಸರನ್ನು ವಿಜಯೇಂದ್ರ ಅಂತಿಮಗೊಳಿಸಿ, ಘೋಷಿಸಿದ್ದಾರೆ.
ಯಾವಾಗ ಸಂದೀಪ್ ರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಿ, ನೇಮಕ ಮಾಡಲಾಯಿತೋ ಸುದ್ದಿಗೋಷ್ಠಿ ನಡೆಸಿದ ಸಂಸದ ಡಾ. ಕೆ.ಸುಧಾಕರ್, 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಸಂದೀಪ್ ರೆಡ್ಡಿ ನೇರ ಕಾರಣ. ಈಗ ರಾಜ್ಯಾಧ್ಯಕ್ಷರು ಅಂತಹ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ರೆ ನಾವು ಕೈ ಕಟ್ಟಿ ಕೂರಬೇಕಾ ಎಂದು ಪ್ರಶ್ನಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ, ವಿಜಯೇಂದ್ರರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ನಾವು 17 ಮಂದಿ ಪಕ್ಷಕ್ಕೆ ಬಂದಿದ್ದೇವೆ. ಒಬ್ಬೊಬ್ಬರನ್ನೇ ಮುಗಿಸುವ ಕೆಲಸವನ್ನು ವಿಜಯೇಂದ್ರ ಮಾಡಲು ಶುರು ಮಾಡಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸುವ ಕೆಲಸ ಆರಂಭಿಸಿರುವ ಅವರು, ನನ್ನ ಮಾತನ್ನು ಪರಿಗಣಿಸದೇ ನನ್ನ ಜಿಲ್ಲೆಯ ಜಿಲ್ಲಾಧ್ಯಕ್ಷರ ನೇಮಕ ಮಾಡಿದ್ದಾರೆ. ವಿಜಯೇಂದ್ರ ನಡೆದುಕೊಳ್ಳುವ ರೀತಿ ಸರಿಯಿಲ್ಲ. ಅವರೇ ಬೇಕಾದ್ರೆ ಬದಲಾಗಲಿ. ರಾಜ್ಯಾಧ್ಯಕ್ಷ ಹುದ್ದೆ ಬೇರೆಯವರಿಗೆ ನೀಡಲಿ ಎಂದು ಒತ್ತಾಯಿಸಿದ್ದು, ವಿಜಯೇಂದ್ರ ವಿರುದ್ಧ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.