ಬೆಂಗಳೂರು: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಳ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ವಿಷಯವನ್ನು ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಪಡಿಸಿದ್ದಾರೆ.ನಮ್ಮ ಸಿಐಡಿ ತಂಡ ಸಮರ್ಥವಾಗಿದೆ. ಹಾಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ರಾಜೀನಾಮೆ ನಿಡುವ ಅವಶ್ಯಕತೆಯಿಲ್ಲ. ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಾರೆ ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಘಟನೆಗೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ಖರ್ಗೆ ಬಿಜೆಪಿಯವರು ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ, ನಾನು ರಾಜೀನಾಮೆ ನೀಡಲ್ಲ ಎಂದು ಎದುರೇಟು ನೀಡಿದ್ದಾರೆ.
ಪ್ರಕರಣವನ್ನು ಸಿಬಿಐಗೆ ವಹಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿ ಜನವರಿ 4 ರಂದು ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿ ಸಚಿವ ಖರ್ಗೆ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ವಿಜಯೇಂದ್ರ ಹೇಳಿದರೆ, ಅವರು ಎಷ್ಟು ಜನರು ಬರುತ್ತಾರೋ ಎಂದು ತಿಳಿಸಿದರೆ ಅವರಿಗೆ ಟಿ ಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದು ಪ್ರಿಯಾಂಕ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯೇಂದ್ರ ಅವರ ಪಾರ್ಟಿಯಲ್ಲೇ ಬೆಲೆಯಿಲ್ಲ. ಬೇರೆ ಇನ್ಯಾರು ಅವರ ಮಾತಿಗೆ ಕಿಮ್ಮತ್ತು ಕೊಡುತ್ತಾರೆ? ಎಂದಿರುವ ಪ್ರಿಯಾಂಕ್ ಖರ್ಗೆ ವಿಜಯೇಂದ್ರ ವಿರುದ್ಧ ಮನಿ ಲ್ಯಾಂಡ್ರಿಂಗ್ ಪ್ರಕರಣವಿದೆ. ಅವರು ಕೂಡ ರಾಜೀನಾಮೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.