ರಾಯಚೂರು: ಯುವತಿಯೊಬ್ಭಳು ದೇವಾಲಯಕ್ಕೆ ಹೊರಟಿದ್ದ ವೇಳೆ ನಾಯಿ ದಾಳಿ ನಡೆಸಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿದೆ. ಕೆಳಗೆ ಬಿದ್ದ ಯುವತಿಯನ್ನು ನಾಯಿಗಳು ಎಳೆದಾಡಿವೆ. ಯುವತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.
ತಲೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತಹೆಪ್ಪುಗಟ್ಟಿದ್ದು, ಯುವತಿ ಕೋಮಾ ಸ್ಥಿತಿಗೆ ಹೋಗಿದ್ದಾಳೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಬಡ ಕುಟುಂಬ ದಿಕ್ಕು ಕಾಣದಂತಾಗಿದೆ.
ಘಟನೆ ಕುರಿತು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಪ್ರತಿಕ್ರಿಯಿಸಿದ್ದು, ಯುವತಿಯ ಚಿಕಿತ್ಸೆ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಟೆಂಡರ್ ಕರೆದು ಬೀದಿ ನಾಯಿ ಹಿಡಿಯಲು ಏಜೆನ್ಸಿಗೆ ಒಪ್ಪಿಸಲಾಗಿದೆ. ಇನ್ನೂ ಹೆಚ್ಚಿನ ಏಜೆನ್ಸಿಗಳಿಗೆ ಗುತ್ತಿಗೆ ನೀಡಿ ನಾಯಿಗಳನ್ನ ಹಿಡಿಯುತ್ತೇವೆ. ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗುತ್ತಿದೆ. ಈಗಾಗಲೇ ಹಿಡಿದು ಬಿಟ್ಟಿರುವ ನಾಯಿಗಳು ಇನ್ನೊಂದೆಡೆ ಸೇರಿಕೊಂಡಿರುವ ಸಾಧ್ಯತೆಯಿದೆ. ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.