ಬೆಂಗಳೂರು: ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (NSDF) ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಯೊಂದಿಗೆ ದೇಶೀ ನಿರ್ಮಿತ ಹೆಚ್ ಎಎಲ್-ಎಸ್ ಎಐ ಹೈ ಪರ್ಫಾರ್ಮೆನ್ಸ್ ಸೆಂಟರ್ ನ್ನು ಎಸ್ ಎಐ ನೇತಾಜಿ ಸುಭಾಸ್ ದಕ್ಷಿಣ ಕೇಂದ್ರದಲ್ಲಿ ಸ್ಥಾಪನೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಹೆಚ್ ಎಎಲ್ ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳ ಅಡಿಯಲ್ಲಿ, ಕಂಪನಿಯು ಬೆಂಗಳೂರಿನಲ್ಲಿ ಹೆಚ್ ಎಎಲ್ -ಎಸ್ ಎಐ ಹೈ ಪರ್ಫಾರ್ಮೆನ್ಸ್ ಸೆಂಟರ್ ಸ್ಥಾಪನೆಗೆ ಬದ್ಧವಾಗಿದೆ. ಈ ಕೇಂದ್ರವು ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
ಇದು ಆಂಥ್ರೊಪೊಮೆಟ್ರಿ, ಬಯೋಮೆಕಾನಿಕ್ಸ್, ವ್ಯಾಯಾಮ ಬಯೋಕೆಮಿಸ್ಟ್ರಿ, ನ್ಯೂಟ್ರಿಷನ್, ಸ್ಪೋರ್ಟ್ಸ್ ಫಿಸಿಯಾಲಜಿ, ಸೈಕಾಲಜಿ, ಸ್ಟ್ರೆಂತ್ & ಕಂಡೀಷನಿಂಗ್, ಸ್ಪೋರ್ಟ್ಸ್ ಮೆಡಿಸಿನ್, ಫಿಸಿಯೋಥೆರಪಿ ಮತ್ತು ಇತರ ಕ್ಷೇತ್ರಗಳಲ್ಲಿ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಅತ್ಯಾಧುನಿಕ ಸೌಲಭ್ಯದೊಂದಿಗೆ, ಕ್ರೀಡಾಪಟುಗಳು ತಮ್ಮ ಪ್ರದರ್ಶನವನ್ನು ಹೆಚ್ಚಿಸುವುದರೊಂದಿಗೆ ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಅವಕಾಶಗಳನ್ನು ಹೊಂದಿರುತ್ತಾರೆ.
ಕಾರ್ಯಕ್ರಮದಲ್ಲಿ ಎಚ್ಎಎಲ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಡಾ ಡಿ ಕೆ ಸುನೀಲ್, ಎಚ್ಎಎಲ್ನ ಸ್ವತಂತ್ರ ನಿರ್ದೇಶಕಿ ಡಾ ದಿವ್ಯಾ ಗುಪ್ತಾ, ಎಚ್ಎಎಲ್ನ ನಿರ್ದೇಶಕ (HR) ಎಬಿ ಪ್ರಧಾನ್; ಟಾಪ್ಸ್ ಸಿಇಒ ಕರ್ನಲ್ ರಾಕೇಶ್ ಯಾದವ್, ಎಸ್ ಎಐ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ (MYAS) ಅಧೀನ ಕಾರ್ಯದರ್ಶಿ ಕಾಮ್ಖಾನ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.