ಬೆಂಗಳೂರು: ನಗರದಲ್ಲಿ ಹೆಬ್ಬಾಳ ಟು ಸಿಲ್ಕ್ ಬೋರ್ಡ್ ಟನಲ್ ರಸ್ತೆ ನಿರ್ಮಾಣ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಟನಲ್ ರಸ್ತೆ ಯೋಜನೆಯ ನ್ಯೂನ್ಯತೆಗಳ ಬಗ್ಗೆ ಬಿಬಿಎಂಪಿ ಕಮಿಷನರ್ಗೆ ಸಂಸದ ಪಿಸಿ ಮೋಹನ್ ನಿನ್ನೆ ಪತ್ರ ಬರೆಯುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇದೀಗ ಟನಲ್ ರಸ್ತೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಟನಲ್ ರಸ್ತೆ ಮತ್ತಷ್ಟು ಸಮಸ್ಯೆ ತಂದಿಡುತ್ತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟನಲ್ ರಸ್ತೆಯಿಂದ ಜನಸಾಮಾನ್ಯರಿಗೆ ಅನುಕೂಲ ಇಲ್ಲ. ಟನಲ್ ರಸ್ತೆಯಿಂದ ಜಲಮೂಲಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಟ್ರಾಫಿಕ್ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತೆ. ಟನಲ್ ರಸ್ತೆ ಬೆಂಗಳೂರಿಗೆ ಅವಶ್ಯಕವಲ್ಲ ಎಂದು ಸಿಟಿಜನ್ ಫಾರ್ ಸಿಟಿಜನ್ ಫೌಂಡೇಷನ್ ಸಂಸ್ಥಾಪಕ ರಾಜ್ ಕುಮಾರ್ ಥೇಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಅನಾನುಕೂಲ ಜಾಸ್ತಿ ಅಂತಾ ವರದಿ ಕೂಡ ನೀಡಿದ್ದರು.
ಈ ಹಿಂದೆ ಕೂಡ ಹಲವು ಬಾರೀ ಟನಲ್ ರಸ್ತೆ ಬಗ್ಗೆ ಪಾಲಿಕೆ ಜೊತೆ ಚರ್ಚೆ ಮಾಡಲಾಗಿದೆ. ಟನಲ್ ರಸ್ತೆ ಆದರೆ ಹಲವು ಅಪಾಯ ಇದೆ. ಸುರಂಗ ನಿರ್ಮಾಣ ವೇಳೆ ಅವಘಡಗಳಾಗುತ್ತೆ. ಜೊತೆಗೆ ಮೆಟ್ರೋ ಮಾರ್ಗ ಕೂಡ ಸಮೀಪ ಇರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಟನಲ್ ನಿರ್ಮಾಣ ವೇಳೆ ಹಲವು ಅಡೆತಡೆಯಿದೆ ಎಂದು ಹೇಳಿದ್ದಾರೆ.
ಸರ್ಕಾರ ಟನಲ್ ಬದಲು ರಸ್ತೆ, ಮೂಲಸೌಕರ್ಯ ನೀಡಲಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಿಸಲಿ. ಟನಲ್ ರಸ್ತೆಯಿಂದ ಬರೀ ಹಣ ವ್ಯರ್ಥವಾಗುತ್ತದೆ. ಹೀಗಾಗಿ ಟನಲ್ ರಸ್ತೆ ಪ್ಲಾನ್ ಬಗ್ಗೆ ಪುನರ್ ಪರಿಶೀಲನೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಇನ್ನು ಸರ್ಕಾರ ಈ ಯೋಜನೆಗೆ ಬರೋಬ್ಬರಿ 8,043 ಕೋಟಿ ರೂ. ಮೀಸಲಿಟ್ಟಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೂ ಅಂದರೆ 18 ಕಿ.ಮೀ ಉದ್ಧದ ಸುರಂಗ ಮಾರ್ಗ ಯೋಜನೆ ಇದಾಗಿದೆ. ಈ ಯೋಜನೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಸಾರ್ವಜನಿಕರನ್ನ ಗಮನದಲ್ಲಿಟ್ಟುಕೊಂಡು ಯೋಜನೆ ಬಗ್ಗೆ ಚಿಂತಿಸಲಿ ಮತ್ತು ಮರುಪರಿಶೀಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಒತ್ತಾಯಿಸಿ ಸಂಸದ ಪಿಸಿ ಮೋಹನ್ ಪತ್ರ ಕೂಡ ಬರೆದಿದ್ದಾರೆ.