ಆಧುನಿಕ ನಗರ ಬೆಂಗಳೂರಿನಲ್ಲಿ ಹಲವು ಪ್ರಾಚೀನ ದೇವಾಲಯಗಳಿವೆ. ಕೆಲವು ದೇವಾಲಯಗಳು ಭವ್ಯತೆಯನ್ನು ಮೈವೆತ್ತಂತೆ ಇದ್ದರೆ, ಕೆಲವು ಬಹಳ ಸರಳವಾಗಿವೆ. ಗುಡ್ಡದ ಮೇಲಿರುವ ಮಂದಿರಗಳೊಂದೆಡೆಯಾದರೆ, ಹಲವು ಅಂತಸ್ತುಗಳಲ್ಲಿರುವ ದೇವಾಲಯಗಳು ಕೆಲವು.ಇನ್ನು ಅಪರೂಪದಲ್ಲಿ ಭೂಮಿಯಡಿಯಲ್ಲಿ ಗವಿಯ ರೂಪದ ಉಪಾಸನಾ ಸ್ಥಳಗಳು ಕೂಡ ಬೆಂಗಳೂರಿನಲ್ಲಿವೆ.
ಅದರಲ್ಲಿ ಪ್ರಸಿದ್ಧ ಬಸವನಗುಡಿಯಲ್ಲಿರುವ ಗವಿಗಂಗಾಧರೇಶ್ವರ ದೇವಾಲಯವು ಒಂದು. ಸಂಕ್ರಾಂತಿಯ ದಿನ ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಸೂರ್ಯರಶ್ಮಿಯನ್ನು ನೋಡಲು ಹಲವು ಜನರು ಸೇರುತ್ತಾರೆ. ಅಲ್ಲೇ ಪಕ್ಕದಲ್ಲಿರುವ ಶ್ರೀಪುತ್ತಿಗೆ ಮಠ ಕೂಡ ಗುಹಾರೂಪದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಗೋವರ್ಧನ ಗಿರಿಧಾರಿಯ ರೂಪವನ್ನು ನೋಡಬಹುದು.
ಆದರೆ ನಾನಿಲ್ಲಿ ಹೇಳ ಹೊರಟಿರುವುದು ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಒಂದು ಗುಹಾದೇವಸ್ಥಾನ. ಇದು ಸುಮಾರು 2000 ವರ್ಷ ಹಳೆಯದು ಎಂದು ಭಾರತೀಯ ಪುರಾತತ್ವ ಇಲಾಖೆಯು ಗುರುತಿಸಿದೆ!!ವಾರಾಂತ್ಯದಲ್ಲಿ ಬೆಂಗಳೂರಿಗರಿಗೆ ತಿರುಗಲು ಬೇಕಾದಷ್ಟು ಸ್ಥಳಗಳಿವೆ. ಅದರಲ್ಲಿ ಒಂದು ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್. ಅಲ್ಲಿರುವ ಮೀನಾಕ್ಷಿ ಮಂದಿರದಿಂದಾಗಿ ಈ ಹೆಸರು. ಈ ವ್ಯಾಪಾರಮಳಿಗೆಯ ಪಕ್ಕದಲ್ಲಿ ಒಂದು ರಸ್ತೆ ಹಾದು ಹೋಗಿದೆ. ಬೆಂಗಳೂರು ಪೇಟೆಯ ಕಡೆಯಿಂದ ಹೋಗುವಾಗ ಎಡಬದಿಗಿದೆ. ಈ ರಸ್ತೆಯಲ್ಲಿ ಸುಮಾರು ನೂರು ಮೀಟರ್ ಒಳನಡೆದರೆ ಅಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯನ್ನು ಎಡಬದಿಯಲ್ಲಿ ಕಾಣಬಹುದು.
ಅದರ ಬದಿಯಲ್ಲಿದೆ ಶ್ರೀ ರಾಮಲಿಂಗೇಶ್ವರ ದೇವಾಲಯ. ವಿಶಾಲವಾದ ಹಾಸುಬಂಡೆಯ ಕೆಳಗಿದೆ ಈ ಗುಹಾ ದೇವಾಲಯ. ಇದನ್ನು ಪ್ರಸ್ತುತ ಆದಿಚುಂಚನಗಿರಿ ಮಠದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಮಠದ ಕಾರ್ಯಾಲಯವನ್ನು ಗುಹೆ ತಲುಪುವ ಮೊದಲೇ ಬಲಗಡೆಗೆ ನೋಡಬಹುದು. ಕೊಂಚ ಮುಂದೆ ಹೋಗುತ್ತಿದ್ದಂತೆಯೇ ಗಣೇಶನ ಮಂದಿರ ಕಾಣಸಿಗುತ್ತದೆ. ಅಲ್ಲೇ ಮುಂದಕ್ಕಿದೆ ಗುಹೆಯ ಪ್ರವೇಶದ್ವಾರ.
ಇಕ್ಕೆಲಗಳಲ್ಲಿ ರಾಮಾಯಣದ ಚಿತ್ರಗಳನ್ನು ಬಿಡಿಸಿರುವುದು ಕಾಣಬಹುದು. ಒಳಹೋಗುತ್ತಿದ್ದಂತೆಯೇ ಗುಹೆಯ ವಿಶಾಲ ಪ್ರಾಂಗಣ ಕಾಣಸಿಗುತ್ತದೆ. ಇಲ್ಲಿ ನೀವು ದೇಹಬಗ್ಗಿಸಿ ನಡೆಯಬೇಕಾಗಿಲ್ಲ, ಕೇವಲ ಮನವ ತಗ್ಗಿಸಿ, ಮೌನದಲಿ ದೇವನ ನೋಡುವ ಸುಖ ನೀವು ಇಲ್ಲಿ ಕಾಣಲಿಕ್ಕಿರುವಿರಿ. ಶ್ರೀರಾಮ, ಸೀತೆ, ಲಕ್ಷ್ಮಣನ ಜೊತೆಗೆ ಹನುಮ ಕೂಡ ಇಲ್ಲಿ ಪೂಜಿಸಲ್ಪಡುತ್ತವೆ. ಶಿವಲಿಂಗ ಹಾಗೂ ನಂದಿಯ ವಿಗ್ರಹಗಳು ಇಲ್ಲಿವೆ. ಇವೆಲ್ಲವೂ ಶಿಲೆಯಮೂರ್ತಿಗಳಾದರೆ, ದೇವಿ ರಾಜರಾಜೇಶ್ವರಿಯ ಪಂಚಲೋಹದ ವಿಗ್ರಹವನ್ನೂ ಕಾಣಬಹುದು.
ಕೆಲವು ವರ್ಷಗಳ ಕೆಳಗೆ ಈ ದೇವಾಲಯವನ್ನು ನವೀಕರಿಸಿದ ಮರಿಯಪ್ಪ ಸ್ವಾಮೀಜಿ, ಮುಂಚೆ ಒಬ್ಬ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಂದಿಬೆಟ್ಟದ ಬೆಟ್ಟದ ದೇವಸ್ಥಾನವನ್ನು ಇವರು ನವೀಕರಿಸುತ್ತಿರುವಾಗ ಅಲ್ಲಿ ಒಬ್ಬರು ಸ್ವಾಮೀಜಿಯ ದರ್ಶನವಾಯಿತು. ಆ ಯೋಗಿಯು ಮರಿಯಪ್ಪರಿಗೆ ಬೆಂಗಳೂರಿನ ಗುಹೆಯಲ್ಲಿ ಧ್ಯಾನ ಮಾಡುವ ಇನ್ನೊಂದು ಯೋಗಿಯನ್ನು ಹುಡುಕಲು ತಿಳಿಸಿದರು. ಆ ಕಾರ್ಯದಲ್ಲಿ ಮಗ್ನರಾಗಿ ಹುಡುಕುತ್ತಿರುವಾಗ ಈ ಗುಹಾದೇವಾಲಯ ಅವರಿಗೆ ಗೋಚರವಾಯಿತು.
ಅಲ್ಲಿ ಧ್ಯಾನದಲ್ಲಿದ್ದ ಶ್ರೀ ರಮಾನಂದ ಸ್ವಾಮೀಜಿಯವರು ಕಾಣಲು ಸಿಕ್ಕಿದರು. ಗುಹೆಯು ಸಿಕ್ಕಿದ 12 ವರ್ಷಗಳ ನಂತರ ಈ ಸ್ವಾಮೀಜಿಯವರು ಸಜೀವ ಸಮಾಧಿಯಾದರಂತೆ!!ಈ ಗುಹೆಯ ಒಳಭಾಗದಲ್ಲಿ ಧ್ಯಾನಮಂಟಪವಿದೆ. ಸುಮಾರು 75 ರಿಂದ 100 ಜನರು ಸುಲಭವಾಗಿ ಹಿಡಿಸುವ ಈ ಮಂಟಪ ಧ್ಯಾನಯೋಗ್ಯವಾಗಿದ್ದು ನಗರದ ಸದ್ದುಗದ್ದಲವಿಲ್ಲದೆ ಪ್ರಶಾಂತವಾಗಿದೆ. ಗುಹೆಯ ಹೊರಭಾಗದಲ್ಲಿ ಕೂಡ ಸಾಯಂಕಾಲದ ಹೊತ್ತು ಸುಮ್ಮನೆ ಕುಳಿತುಕೊಳ್ಳಲು ಪ್ರಶಸ್ತವಾಗಿದೆ. ನಗರದ ವೇಗದ ಜೀವನದ ಮಧ್ಯೆ ಯೋಗ್ಯವಾಗಿ ಕಾಲ ಕಳೆಯಲು ಈ ಜಾಗ ಉತ್ತಮವಾಗಿದೆ.
ಈ ಗುಹಾ ಮಂದಿರದ ಬಗ್ಗೆ ಗೊತ್ತಿದ್ದವರು ಆಗಾಗ ಹೋಗಿ ಬರುತ್ತಿರುತ್ತಾರೆ, ಆದರೆ ಇನ್ನೂ ಕೂಡ ಅಷ್ಟು ಜನಪ್ರಿಯವಾಗಿಲ್ಲ. ಮುಂದೊಂದು ದಿನ ನೀವು ಬನ್ನೇರುಘಟ್ಟ ರಸ್ತೆಯ ಮಕ್ಕದಲ್ಲಿದ್ದರೆ, ಅಥವಾ ಮೀನಾಕ್ಷಿ ಮಳಿಗೆಗೆ ಹೋಗುವ ಸಂದರ್ಭವಿದ್ದರೆ, ಈ ದೇವಾಲಯಕ್ಕೂ ಒಮ್ಮೆ ಹೋಗಿ ಬನ್ನಿ. ಒಂದು ಸುಂದರ ಸಂಜೆ ಕಳೆಯಲು ಮೋಸವಿಲ್ಲ. ಇನ್ನು ಬೆಂಗಳೂರಿಗೆ ನಿಮ್ಮ ಸ್ನೇಹಿತರು ಅಥವಾ ಬಂಧುಗಳು ಬರುವವರಿದ್ದರೆ ಅವರನ್ನು ಈ ದೇವಾಲಯಕ್ಕೆ ಕರೆದೊಯ್ಯಲು ಮರೆಯದಿರಿ. ಹಾಗಾದರೆ ಒಮ್ಮೆ ಹೋಗಿ ಬರುವಿಲ್ಲವೇ?ಬರೆದವರು: ಸಚಿನ್ ಮುಂಗಿಲ,ಅಖಿಲ ಭಾರತ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಕಾರ್ಯದರ್ಶಿಗಳು.