ಬೆಂಗಳೂರು: ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರಿಗೆ ಅಭಿನಂದನಾ ಸಮಾ ರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.1 ಭಾನುವಾರ ಆಯೋಜಿಸಲಾಗಿದ್ದು, ಅಂದು ಅವರ ಕುರಿತ ಅಭಿನಂದನಾ ಗ್ರಂಥವೂ ಬಿಡುಗಡೆ ಆಗಲಿದೆ.
ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಇದೇ ಸಂದರ್ಭದಲ್ಲಿ ಬೇಲೂರು ರಘುನಂದನ್ ನಿರ್ದೇಶನದ ಬೆಂಕಿ ರೂಟು’ ಎಂಬ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ `ಕಾರೆಕಾಯ್ ಹಡ್ಲು’ ಅಭಿನಂದನಾ ಗ್ರಂಥವನ್ನು ಸಾಹಿತಿ ಡಾ.ವಿಜಿಯಮ್ಮ ಬಿಡುಗಡೆ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಶೋತ್ತ ಬಿಳಿಮಲೆ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತರ ಜಾಣಗೆರೆ ವೆಂಕಟರಮಣಯ್ಯ ಅಭಿನಂದನಾ ಮಾತುಗಳನ್ನಾಡಲಿದ್ದಾರೆ ಎಂದರು.
ಹಾಸನದಿಂದಲೇ ನಾಗರಾಜ್ ಅವರನ್ನು ಗಮನಿಸಿದ್ದೇನೆ. ಅವರು ತಮ್ಮದೇ ಆದ ಓದುಗ ವಲಯವನ್ನು ಹೊಂದಿರುವ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು ಮಲೆನಾಡಿಗೆ ಮಾತ್ರ ಸೀಮಿತವಲ್ಲ, ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಗಣನೀಯವಾದದ್ದು ಎಂದರು. ಎಪ್ಪತ್ತರ ದಶಕದಿಂದಲೂ ಸಾಹಿತಿ ಕೃಷಿಯಲ್ಲಿದ್ದಾರೆ. ನಿಲುವಂಗಿಯ ಕನಸು ಕೃತಿ ನಾಟಕವಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕಳೆದ 50 ವರ್ಷಗಳಿಂದಲೂ ಸಾಹಿತ್ಯ ರಚನೆ ಮಾಡಿಕೊಂಡು ಬಂದಿರುವ ಇವರಿಗೆ ಸಾಹಿತ್ಯಾಸಕ್ತರು, ಆಪ್ತರು ಎಲ್ಲರೂ ಸೇರಿ ಅಭಿನಂದನೆ ಸಲ್ಲಿಸುತ್ತಿರುವುದು ಮಹತ್ವದ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಉದ್ಯಮಿ ಶಿವಕುಮಾರ್ ಜಾಗಟೆ ಮಾತನಾಡಿ, ನಾವೆಲ್ಲ ಹಾಡ್ಲಹಳ್ಳಿ ನಾಗರಾಜ್ ಅವರ ಕಥೆ ಕಾದಂಬರಿಗಳನ್ನು ಓದಿ ಬೆಳೆದವರು. ಅವುಗಳಿಂದ ಸಾಕಷ್ಟು ಜೀವನ ಅನುಭವ ಹೊಂದಲು ಸಾಧ್ಯವಾಯಿತು. ನಮ್ಮಂತಹ ಹಲವಾರು ಮಂದಿಗೆ ಸ್ಪೂರ್ತಿಯಾಗಿರುವ ಮಲೆನಾಡಿನ ಹಿರಿಯರಿಗೆ ಅಭಿನಂದಿಸುವ ಕಾರ್ಯ ಖುಷಿ ಕೊಡುತ್ತದೆ ಎಂದರು.
ಕತೆಗಾರ್ತಿ ದಯಾ ಗಂಗನಘಟ್ಟ ಮಾತನಾಡಿ, ಸರ್ಕಾರ ಹಾಗೂ ಅದರ ಅಂಗ ಸಂಸ್ಥೆಗಳಿಂದ ಗುರುತಿಸಲು ಸಾಧ್ಯವಾಗದ ಸಾಹಿತಿಯೊಬ್ಬರನ್ನು ಜನಸಾಮಾನ್ಯರೇ ಗುರುತಿಸಿ ಅಭಿನಂದಿಸುತ್ತಿರುವುದು ಮಾದರಿ ಕೆಲಸವಾಗಿದೆ ಎಂದರು.ನಾಡಿನ ಎಲ್ಲಾ ಸದಭಿರುಚಿಯ ಮನಸ್ಸುಗಳು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಘಟಕ ಹಾ.ನ.ಪ್ರಸನ್ನಕುಮಾರ್ ಮನವಿ ಮಾಡಿದರು.