ಬೆಂಗಳೂರು: ದೇಶದ ಪ್ರತಿಷ್ಠಿತ ಹಾಗೂ ಅತಿದೊಡ್ಡ ನ್ಯಾನೋ ಸಮ್ಮೇಳನವಾದ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದ್ದಾರೆ.ದೇಶ, ವಿದೇಶಗಳ ಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು, ತಾಂತ್ರಿಕ ಚಿಂತಕರು, ಉದ್ಯಮಗಳ ಖ್ಯಾತನಾಮ ರೊಂದಿಗೆ ಈ ಪ್ರತಿಷ್ಠಿತ ನ್ಯಾನೋ ಟೆಕ್ನಾಲಜಿ ಸಮಾವೇಶದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಾನು ಮೊದಲನೆಯದಾಗಿ ಪ್ರತಿಷ್ಠಿತ ಪ್ರೊ .ಸಿ.ಎನ್.ಆರ್. ರಾವ್…ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ.ಅರಿಂದಮ್ ಘೋಷ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ನಡೆಯುವ ಇಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾವೇಶದಲ್ಲಿ ಭಾಗವಹಿಸುವುದು ನನಗೆ ಯಾವತ್ತೂ ಸ್ಪೂರ್ತಿದಾಯಕ ಹಾಗೂ ಸಂತಸದ ವಿಚಾರ ಎಂದಿದ್ದಾರೆ.
ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿಯನ್ನು ಕಲ್ಪಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ನಮ್ಮ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ.ಐಐಎಸ್ಸಿ, ಜೆಎನ್ಸಿಎಎಸ್ಆರ್, ಎನ್ಸಿಬಿಎಸ್, ಸಿಇಎನ್ಎಸ್ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ದೇಶದ ನ್ಯಾನೋ ಟೆಕ್ ಹಬ್ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ನನಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಈ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ ಎಂದು ಹೇಳಿದ್ದಾರೆ.
ಈ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಈ ಸುಂದರ ಉದ್ಯಾನನಗರಿಯಲ್ಲಿ ತಾವಿರುವ ಸಮಯವನ್ನು ಸಂತಸದಿಂದ ಕಳೆಯಿರಿ ಎಂದು ನಾನು ಆಶಿಸುತ್ತೇನೆ. 13 ನೇ ಬೆಂಗಳೂರು ಇಂಡಿಯಾ ನ್ಯಾನೋ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸುತ್ತೇನೆ.ಸಮಾರಂಭದಲ್ಲಿ ಭಾರತ ರತ್ನ ಪ್ರೊ. ಸಿ.ಎನ್. ಆರ್. ರಾವ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎನ್.ಎಸ್. ಬೋಸ್ರಾಜ್, ಶಾಸಕ ರಿಜ್ವಾನ್ ಹರ್ಷದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೊದಲಾದವರು ಹಾಜರಿದ್ದರು.