ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳಿಗೆ ಲೋಪವಾಗದಂತೆ ಕಾಲಕಾಲಕ್ಕೆ ಆಯಾ ದಿನದ ಮಹತ್ವ ಮತ್ತು ಸಮಯಪ್ರಜ್ಞೆ ಮೂಡಿಸುವಲ್ಲಿ ವಿವಿ ಬಿಡುಗಡೆ ಮಾಡಿರುವ 2025ನೇ ಸಾಲಿನ ಕ್ಯಾಲೆಂಡರ್ ಹಾಗೂ ದಿನಚರಿ ಸಹಕಾರಿಯಾಗಲಿ,ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ ಎಂದು ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹಾರೈಸಿದರು.
ಬೆಂಗಳೂರು ಉತ್ತರ ವಿವಿಯ ನಗರ ಹೊರವಲಯದ ಟಮಕದ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವರ್ಷದ ವಿವಿಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.ಬೆಂಗಳೂರು ಉತ್ತರ ವಿವಿ ತನ್ನ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಲೋಪವಿಲ್ಲದಂತೆ ತನ್ನ ಕೆಲಸ ಮಾಡಿಕೊಂಡು ಬಂದಿದೆ, ಇದಕ್ಕೆ ಎಲ್ಲಾ ಸಿಂಡಿಕೇಟ್ ಸದಸ್ಯರು, ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದರು.
ಹೊಸ ವರ್ಷದಲ್ಲಿ ವಿವಿಯಿಂದ ಮತ್ತಷ್ಟು ಹೊಸ ಹೊಸ ಆಲೋಚನೆಗಳು, ಕಾರ್ಯಕ್ರಮಗಳನ್ನು ಮೂಡಿ ಬರುವಂತೆ ಮಾಡಲು ಎಲ್ಲರ ಸಹಕಾರ ಕೋರಿದ ಅವರು, ನೂತನ ವರ್ಷ ಎಲ್ಲರಿಗೂ ಶುಭ ತರಲಿ, ವಿವಿಯ ಕ್ಯಾಂಪಾಸ್ ಶೀಘ್ರ ಲೋಕಾರ್ಪಣೆಯಾಗಲಿ ಎಂದು ಆಶಿಸಿದರು.ಈ ನಡುವೆ `ಇಂಡಿಯಾ ಫಾರ್ ಐಎಎಸ್’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಚಿಸುವ ಬೆಂಗಳೂರು ಉತ್ತರ ವಿವಿಯ ಎಲ್ಲಾ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ ಒದಗಿಸುವ ಒಪ್ಪಂದಕ್ಕೂ ಸಹಿ ಹಾಕಿದ್ದು, ಹೊಸ ವರ್ಷದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಇ ಸೌಲಭ್ಯ ಸಿಗಲಿ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
`ಇಂಡಿಯಾ ಫಾರ್ ಐಎಎಸ್’ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಿದ್ದು, ಕಲಿಕೆಗೆ ಅಗತ್ಯವಾದ ಪಠ್ಯವಸ್ತು, ಕಲಿಕಾ ಮೆಟಿರಿಯಲ್ಅನ್ನು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಿದೆ ಎಂದು ತಿಳಿಸಿದರು.ಇದೇ ಮತ್ತಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ವಿವಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದ ಅವರು, ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ವಿವಿಗೆ ಉತ್ತಮ ಹೆಸರು ತರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉತ್ತರ ವಿವಿ ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ,ಅರ್ಬಾಸ್, ಜೈದೀಪ್, ಸಹನಾ, ಬಸವರಾಜ್, ವೆಂಕಟೇಶಪ್ಪ, ನಿರೂಪ್,
ಕುಲಸಚಿವರಾದ ಡಾ.ತಿಪ್ಪೇಸ್ವಾಮಿ, ಡಾ.ಕುಮುದಾ, ವಿವಿಯ ವಿತ್ತಾಧಿಕಾರಿ ವಸಂತಕುಮಾರ್, ಶ್ರೀನಿವಾಸರಾವ್ ಮತ್ತಿತರರು ಹಾಜರಿದ್ದರು.