ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಿರುವ ಲೋಕಾಯುಕ್ತ ಮಂಗಳವಾರ ಬೆಳಂಬೆಳಗ್ಗೆ ಬೆಂಗಳೂರು, ಕೊಪ್ಪಳ ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 5 ಕಡೆ ದಾಳಿ ನಡೆಸಿ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 10 ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ನಿವಾಸಗಳಿಗೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮಂಜುನಾಥ್ ನಗರದಲ್ಲಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಹೆಚ್ಒ ನಿವಾಸ, ಸುನಿಲ್ ಕುಮಾರ್ ನಿವಾಸಕ್ಕೆ ಬೆಳಗ್ಗೆ 6 ಗಂಟೆಗೇ ಲೋಕಾ ಅಧಿಕಾರಿಗಳು ಆಗಮಿಸಿದ್ದರು. ಆದರೆ, 10 ಗಂಟೆ ತನಕ ಬಾಗಿಲು ತೆರೆಯದೇ ಹೈಡ್ರಮಾ ನಡೆಯಿತು. ನಂತರ 10 ಗಂಟೆಯ ಬಳಿಕ ಸುನೀಲ್ ಬಾಗಿಲು ತೆರೆದರು. ಸದ್ಯ ಸುನಿಲ್ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಪ್ಪಳದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ ಅಗಡಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಮುಂಜಾನೆ ಮನೆ ಮೇಲೆ ದಾಳಿ ನೆಡೆಸಿದ ಲೋಕಾಯುಕ್ತ ಪೊಲೀಸರು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಪ್ಪಳದ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಯಾಗಿದೆ.