ಹೆಚ್.ಎಸ್.ಆರ್.ಸಿಟಿಜನ್ ಫೋರಂ ವತಿಯಿಂದ ಸ್ವಚ್ಛಗೃಹ ಕಲಿಕಾ ಕೇಂದ್ರದಲ್ಲಿ ಮಕರ ಸಂಕ್ರಾತಿ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಆಧುನಿಕ ಜೀವನ ಶೈಲಿಯ ನಡುವೆ ಸಾಂಪ್ರದಾಯಿಕ ಹಾಗೂ ದೇಸೀಯ ಸೊಗಡಿನ ಮರು ಸೃಷ್ಟಿಯೊಂದಿಗೆ, ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಹಬ್ಬ ಹರಿದಿನಗಳ ಆಚರಣೆ ಸಾಧ್ಯ ಎನ್ನುವುದನ್ನು ಬಿಂಬಿಸುವುದೇ ಈ ಆಚರಣೆಯ ಉದ್ದೇಶವಾಗಿತ್ತು.
ಸದಾ ವಾಹನಗಳ ದಟ್ಟಣೆಯಿಂದ ಗಿಜಿಗಿಡುವ ಹೆಚ್ ಎಸ್ ಆರ್ ಬಡಾವಣೆಯ ಸ್ವಚ್ಛಗೃಹ ಕಲಿಕಾ ಕೇಂದ್ರದಲ್ಲಿ ಹಸಿರಲೆ ಹೂವು ಹಣ್ಣುಗಳಿಂದ ಆವೃತಗೊಂಡ ಮರಗಿಡಗಳ ನಡುವೆ, ಗೋಮಯ ಸಿಂಪಡಿಸಿ, ರಂಗವಲ್ಲಿ ಇಟ್ಟು, ಹಸು ಕರುಗಳಿಗೆ ಶೃಂಗರಿಸಿ, ಉರುವಲಿನಿಂದ ಪೊಂಗಲ್ ತಯಾರಿಸಿ ಪೂಜೆಯನ್ನು ಮಾಡಲಾಯಿತು ಮತ್ತು ಒಂದು ಗ್ರಾಮದ ವಾತಾವರಣ ಸೃಷ್ಟಿಯಾಯಿತು. ಸಾಂಪ್ರದಾಯಿಕ ವಾಗಿ ಉರುವಲಿನಿಂದ ತಯಾರಿಸಿದ ಬೆಂಗಳೂರು ನಗರಕ್ಕೆ ಗ್ರಾಮೀಣ ಸೊಗಡು ಪೊಂಗಲ್ ಮತ್ತು ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿಕೊಂಡರು. ಸ್ಥಳೀಯ ಮಹಿಳೆಯರ ಮತ್ತು ಮಕ್ಕಳ ಕೋಲಾಟ, ಭರತನಾಟ್ಯ, ಸಂಗೀತಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಕಾರ್ಯಕ್ರಮಕ್ಕೆ ಮೆರಗು ತಂದಿತು.