ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇನ್ನು ಈ ಹೆದ್ದಾರಿಯಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಶೀಘ್ರದಲ್ಲೇ, ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯ ಸರ್ವಿಸ್ ರಸ್ತೆಯ ಬಳಕೆದಾರರು ಪಟ್ಟಣಗಳಿಗೆ ದೀರ್ಘ ತಿರುವುಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪೂರ್ಣ ಸರ್ವೀಸ್ ರಸ್ತೆಯೇ ಇಲ್ಲ. ಇದು ರೈಲು ಮಾರ್ಗದಂತಹ ಅಡೆತಡೆಗಳಿಂದ ಕೂಡಿದ್ದು, ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇದೀಗ ವಾಹನಗಳು ಬಿಡದಿ, ಚನ್ನಪಟ್ಟಣ, ಮತ್ತು ಮದ್ದೂರಿನಂತಹ ಪಟ್ಟಣಗಳಿಗೆ ತೆರಳಿ, ಅಲ್ಲಿಂದ ಹೆದ್ದಾರಿಯನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಮತ್ತು ಈ ಪ್ರದೇಶಗಳಿಗೆ ಆಗಮಿಸಬೇಕೆಂದರೆ ಸುತ್ತಾಡಿಕೊಂಡು ಬರಬೇಕಾಗುತ್ತದೆ. ಇದರಿಂದ ವಾಹನ ಸವಾರರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರೈಲ್ವೆ ಹಳಿಗಳಿಂದಾಗಿ ಸರ್ವಿಸ್ ರಸ್ತೆ ಸ್ಥಗಿತಗೊಂಡಿರುವ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲಿದೆ. ಇದು ಪೂರ್ಣಗೊಂಡ ನಂತರ, ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ಮುಖ್ಯರಸ್ತೆಗೆ ಸಮಾನಾಂತರವಾದ ಸರ್ವಿಸ್ ರಸ್ತೆಯಲ್ಲಿ ಮೈಸೂರನ್ನು ತಲುಪಬಹುದು.
ಬೆಂಗಳೂರು-ಮೈಸೂರು ನಿಯಂತ್ರಿತ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಳಿ ಬರುತ್ತಿರುವ ದೂರುಗಳನ್ನು ಸರಿಪಡಿಸಲು NHAI ಕ್ರಮ ಕೈಗೊಂಡಿದೆ ಎಂದು ಪ್ರಾದೇಶಿಕ ಅಧಿಕಾರಿ (ಕರ್ನಾಟಕ) ವಿಲಾಸ್ ಪಿ ಬ್ರಹ್ಮಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಇದರೊಂದಿಗೆ ಮುಖ್ಯರಸ್ತೆಯ ಉದ್ದಕ್ಕೂ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಮಾರ್ಚ್ 2023 ರಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾದಾಗಿನಿಂದ ನಿರಂತರ ಸರ್ವೀಸ್ ರಸ್ತೆಗಳ ಕೊರತೆಯು ಪ್ರಮುಖ ದೂರುಗಳಲ್ಲಿ ಒಂದಾಗಿದೆ. ವಾಹನ ಮಾಲೀಕರು ಸರ್ವಿಸ್ ರಸ್ತೆಗಳಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಹೆದ್ದಾರಿಯ ಎರಡೂ ಬದಿಯ ಗ್ರಾಮಸ್ಥರು ಅಪೂರ್ಣವಾಗಿರುವ ಸರ್ವಿಸ್ ರಸ್ತೆಗಳ ಬಗ್ಗೆ ದೂರುಗಳನ್ನು ಸಲ್ಲಿಸಿದ್ದಾರೆ. ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕಾಮಗಾರಿ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಮೈಸೂರುವರೆಗಿನ ಸರ್ವೀಸ್ ರಸ್ತೆಗಳು ಪೂರ್ಣಗೊಳ್ಳಲಿವೆ ಎಂದು ಬ್ರಹ್ಮಾಂಕರ್ ಹೇಳಿದರು.