ದೊಡ್ಡಬಳ್ಳಾಪುರ: ವಕೀಲರ ಕಷ್ಟ ಸಂಕಷ್ಟಗಳಿಗೆ ದನಿಯಾಗಿ, ಹಿತರಕ್ಷಕನಾಗಿ ಸದಾ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ- ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್ ಹೇಳಿಕೆಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 6,820 ಮತಗಳನ್ನು ಪಡೆಯುವ ಮೂಲಕ ವಿವೇಕ್ ಸುಬ್ಬಾರೆಡ್ಡಿ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಅದರಂತೆ ದೊಡ್ಡಬಳ್ಳಾಪುರ ಹಿರಿಯ ರಾಜಕೀಯ ಮುತ್ಸದ್ದಿ ದಿ. ಸಿ. ಡಿ.ಸತ್ಯನಾರಾಯಣ ಗೌಡರ ಪುತ್ರ ಗಿರೀಶ್ ಕುಮಾರ್ ಸಿ.ಎಸ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ.ಗಿರೀಶ್ ಕುಮಾರ್ ಸಿ.ಎಸ್ ಅವರು ಎಎಬಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ 5,060 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿ.ಆರ್.ಗೌಡ ಅವರನ್ನು 3,128 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿನ ಸಿವಿಲ್ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್, ವಕೀಲರ ಸಂಘದ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ದೊರೆತ ದೊಡ್ಡ ಗೌರವ. ಈ ಸ್ಥಾನವನ್ನು ಗೌರವದಿಂದ ಮತ್ತು ಜವಾಬ್ದಾರಿಯುತವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ.
ನಮ್ಮ ವಕೀಲರ ಕಷ್ಟ ಸಂಕಷ್ಟಗಳಿಗೆ ದನಿಯಾಗಿ ಅವರ ಹಕ್ಕುಗಳ ಮತ್ತು ಹಿತರಕ್ಷಕನಾಗಿ ಸದಾ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಗೆಲುವಿನಲ್ಲಿ ಎಲ್ಲಾ ವಕೀಲರ ಬೆಂಬಲದ ಜೊತೆಗೆ ದೊಡ್ಡಬಳ್ಳಾಪುರ ವಕೀಲರ ಸಹಕಾರವನ್ನು ಮರೆಯುವಂತಿಲ್ಲ. ಜೊತೆಗೆ ನನ್ನ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಸ್ತ ವಕೀಲ ಬಂದುಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ವಕೀಲರ ಸಂಘಕ್ಕೆ ಕಟ್ಟಡವಿಲ್ಲ. ಶೀಘ್ರವಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರತ್ಯೇಕ ಗ್ರಂಥಾಲಯ ಕಟ್ಟಡ, ಶೌಚಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಬೇಡಿಕೆಗಳನ್ನು ದೊಡ್ಡಬಳ್ಳಾಪುರ ವಕೀಲರ ಸಂಘದ ವತಿಯಿಂದ ಉಪಾಧ್ಯಕ್ಷ ಗಿರೀಶ್ ಕುಮಾರ್ ಅವರ ಮುಂದಿಡಲಾಯಿತು.ದೊಡ್ಡಬಳ್ಳಾಪುರ ವಕೀಲರ ಸಂಘದ ರವಿ ಮಾವಿನಕುಂಟೆ ಮಾತನಾಡಿ, ಬೆಂಗಳೂರು ವಕೀಲರ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಗಿರೀಶ್ ಕುಮಾರ್ ಅವರು ಆಯ್ಕೆ ಆಗಿರುವುದು ದೊಡ್ಡಬಳ್ಳಾಪುರಕ್ಕೆ ಹೆಮ್ಮೆಯ ವಿಷಯ. ತಾಲೂಕಿನ ವಕೀಲರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುವ ವ್ಯಕ್ತಿ, ಮುಂದಿನ ದಿನಗಳಲ್ಲಿ ತಾಲೂಕು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸಹಕರಿಸಬೇಕು. ಪಕ್ಷ ಭೇದ ಮರೆತು ವಕೀಲರ ಏಳಿಗೆಗೆ ಶ್ರಮಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿದೆ ಎಂದು ತಿಳಿಸಿದರು.ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅಂಜನ್ ಕುಮಾರ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಎಂ.ಸುರೇಶ್, ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಖಜಾಂಚಿ ವಿಜಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.