ಬೆಳಗಾವಿ: ವಿಧಾನಪರಿಷತ್ತಿನಲ್ಲಿಂದು ಒಳ ಮೀಸಲಾತಿ ಹಾಗೂ ಮುಡಾ ಪ್ರಕರಣ ಪ್ರತಿಧ್ವನಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಮುಡಾ ಹಗರಣ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೇಡಿಕೆಗೆ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ತೀಕ್ಷ್ಣವಾಗಿ ಉತ್ತರ ನೀಡುವ ಮೂಲಕ ಅವರ ನಿಲುವನ್ನು ಪ್ರಶ್ನಿಸಿದರು.
RSS ಮತ್ತು ಸಂಘ ಪರಿವಾರಕ್ಕೆ ಮಂಜೂರಾದ ಜಮೀನು ಮತ್ತುಈ ಭೂಮಿಗೆ ಎಷ್ಟು ಹಣ ನೀಡಿದ್ದಾರೆ ಎಂಬುದರ ತನಿಖೆಗೆ ವಿಜಯೇಂದ್ರ ಒತ್ತಾಯಿಸಬೇಕು ಎಂದು ಬಿಕೆ ಹರಿಪ್ರಸಾದ್ ಹೇಳಿದರು. ಬಲ ಪಂಥೀಯ ಸಂಘಟನೆಗಳೊಂದಿಗೆ ಬಿಜೆಪಿ ಮೈತ್ರಿ ಕಡೆಗೆ ಗಮನ ಕೇಂದ್ರೀಕರಿಸಿ ಮಾತನಾಡಿದ ಹರಿಪ್ರಸಾದ್, ಅವರ ಭೂ ವ್ಯವಹಾರಗಳ ಕುರಿತು ಹೆಚ್ಚಿನ ಪರಿಶೀಲನೆಗೆ ಕರೆ ನೀಡಿದರು.
ಹರಿಪ್ರಸಾದ್ ಸುಪ್ರೀಂ ಕೋರ್ಟ್ ನ ತೀರ್ಪನ್ನು ಉಲ್ಲೇಖಿಸಿದಾಗ ಒಳಮೀಸಲಾತಿ ವಿಷಯದತ್ತ ಚರ್ಚೆ ಹೊರಳಿತು. ಸುಪ್ರೀಂ ಕೋರ್ಟ್ ಒಳ ಮೀಸಲಾತಿಗೆ ನಿರ್ದೇಶನ ನೀಡಿದೆ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಜಾರಿಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದರು.