ಬೆಳಗಾವಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ತಿದ್ದುಪಡಿ)ವಿಧೇಯಕ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿಂದು ಸಭಾತ್ಯಾಗ ಮಾಡಿತು. ಉತ್ತಮ ಆಡಳಿತ ಮತ್ತು ಕಾರ್ಯನಿರ್ವಹಣೆಗಾಗಿ ಅದರ ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ಬದಲಾಯಿಸಿ ಮುಖ್ಯಮಂತ್ರಿಗೆ ಅಧಿಕಾರ ನೀಡುವುದು ಈ ವಿಧೇಯಕದ ಉದ್ದೇಶವಾಗಿದೆ. ಬಿಜೆಪಿ ಸಭಾತ್ಯಾಗದ ನಡುವೆಯೂ ವಿಧೇಯಕ ಅಂಗೀಕಾರವಾಯಿತು.
ವಿಧೇಯಕ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ, ಇದು ಪ್ರಗತಿಪರ ಮಸೂದೆಯಲ್ಲ. ರಾಜಭವನದೊಂದಿಗೆ ಸಂಘರ್ಷವನ್ನು ಕಾಂಗ್ರೆಸ್ ಸರ್ಕಾರ ಕಡಿಮೆ ಮಾಡಬೇಕು ಎಂದು ಹೇಳಿದರು. ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮತ್ತೋರ್ವ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮನವಿ ಮಾಡಿದರು.
ಇದು ಆಡಳಿತಾರೂಢ ಪಕ್ಷದ ದ್ವೇಷದ ರಾಜಕೀಯದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಆರೋಪಿಸಿದರು. ಈ ಆರೋಪಗಳನ್ನು ತಳ್ಳಿಹಾಕಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ಮಸೂದೆ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯದ ಉತ್ತಮ ಆಡಳಿತ, ಸಹಕಾರ ಮತ್ತು ಸುಗಮ ಕಾರ್ಯನಿರ್ವಹಣೆಗಾಗಿ ಈ ಮಸೂದೆ ಅಗತ್ಯವಾಗಿದೆ. ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರೇ ಮಾತ್ರ ಕುಲಪತಿಯಾಗಬೇಕು ಎಂದು ದೇಶದ ಯಾವುದೇ ಕಾನೂನು ಹೇಳಿಲ್ಲ. ದೇಶದಲ್ಲಿರುವ ಅನೇಕ ವಿಶ್ವವಿದ್ಯಾಲಗಳಲ್ಲಿ ಮುಖ್ಯಮಂತ್ರಿಗಳು ಕುಲಪತಿಯಾಗಿದ್ದಾರೆ ಎಂದರು.
ಸಚಿವರ ವಿವರಣೆಯಿಂದ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಪ್ರತಿಭಟನೆಯ ಭಾಗವಾಗಿ ಸದನದಿಂದ ಸಭಾತ್ಯಾಗ ಮಾಡಿದರು. ಬಳಿಕ ಬಿಜೆಪಿ ಸಭಾತ್ಯಾಗದ ನಡುವೆಯೂ ವಿಧೇಯಕ ಅಂಗೀಕಾರವಾಯಿತು.